ರಾಜ್ಯದ ಬೀಡಿ ಕಾರ್ಮಿಕರಿಗೆ ಶೀಘ್ರದಲ್ಲೇ ಶುಭಸುದ್ದಿ : ತಿಂಗಳಾಂತ್ಯದೊಳಗೆ ಕನಿಷ್ಟ ವೇತನ ನಿಗದಿ

ರಾಜ್ಯದ ಬೀಡಿ ಕಾರ್ಮಿಕರಿಗೆ ರಾಜ್ಯ ಸರ್ಕಾರ ಶೀಘ್ರದಲ್ಲೇ ಶುಭ ಸುದ್ದಿ ನೀಡಲಿದೆ. ಈ ತಿಂಗಳ ಅಂತ್ಯದೊಳಗಾಗಿ ಬೀಡಿ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ ಮಾಡುವುದಾಗಿ ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್​ ಭರವಸೆ ನೀಡಿದ್ದಾರೆ.

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ವಿಧಾನ ಪರಿಷತ್​​ ಕಲಾಪದ ಶೂನ್ಯ ವೇಳೆಯಲ್ಲಿ ಐವಾನ್​ ಡಿಸೋಜಾ ಈ ವಿಚಾರ ಪ್ರಸ್ತಾಪಿಸಿದ್ದರು. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬೀಡಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಅನೇಕ ಕುಟುಂಬಗಳಿವೆ. 2018ರ ಏಪ್ರಿಲ್​ 1ರಿಂದಲೇ ಕಾರ್ಮಿಕರ ಕೂಲಿ ಅಧಿಸೂಚನೆ ಪ್ರಕಟವಾಗಿದೆ. ಆದರೆ ಬೀಡಿ ಮಾಲೀಕರು ಹೈಕೋರ್ಟ್​ನಿಂದ ತಡೆಯಾಜ್ಞೆ ತಂದ ಪರಿಣಾಮ ಕಳೆದ 6 ವರ್ಷಗಳಿಂದ ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿ ದೊರೆಯುತ್ತಿಲ್ಲ ಎಂದು ಹೇಳಿದ್ದರು.

ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಕನಿಷ್ಠ ಕೂಲಿ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಕೂಡ ಹೊರಡಿಸಿದೆ. 2024ರ ಏಪ್ರಿಲ್‌ 1ರಿಂದ ಸಾವಿರ ಬೀಡಿಗೆ 301.91 ರೂ. ನಂತೆ ಬೀಡಿ ಕಾರ್ಮಿಕರಿಗೆ ಮಾಲೀಕರು ವೇತನ ವಿತರಿಸಬೇಕು. ಆದರೆ ಮಾಲೀಕರು ಕೇವಲ 284.88 ರೂ. ನೀಡುತ್ತಿದ್ದಾರೆ. ಬೀಡಿ ಮಾಲೀಕರು ರಾಜ್ಯ ಸರಕಾರ ನಿಗದಿಗೊಳಿಸಿರುವ ಕನಿಷ್ಠ ಕೂಲಿ ಸಾವಿರ ಬೀಡಿಗೆ 301.92 ನೀಡಬೇಕಿದೆ ಎಂದು ಐವಾನ್​ ಡಿಸೋಜಾ ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮೀ ಸಹಕಾರಿ ಬ್ಯಾಂಕ್‌ನಿಂದ ಸದ್ಯಕ್ಕಿಲ್ಲ ಸಾಲ ಸೌಲಭ್ಯ : ಫಲಾನುಭವಿಗಳಿಗೆ ಭಾರೀ ನಿರಾಶೆ

ಇದಕ್ಕೆ ಉತ್ತರಿಸಿದ ಕಾರ್ಮಿಕ ಸಚಿವ ಸಂತೋಷ್​ ಲಾಡ್​ ಒಂದು ತಿಂಗಳ ಒಳಗಾಗಿ ಈ ಸಮಸ್ಯೆಗೆ ಪರಿಹಾರ ನೀಡುವ ಮೂಲಕ ಬೀಡಿ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಬಗೆಹರಿಸುವ ಭರವಸೆ ನೀಡಿದ್ದಾರೆ. ಒಂದು ವೇಳೆ ಈ ಸಮಸ್ಯೆ ಬಗೆಹರಿದಲ್ಲಿ ಬೀಡಿ ಕಾರ್ಮಿಕರು 1 ಸಾವಿರ ಬೀಡಿಗೆ 17 ರೂಪಾಯಿ ಹೆಚ್ಚುವರಿ ಹಣ ಪಡೆಯಲಿದ್ದಾರೆ.ಇದರಿಂದ ಬೀಡಿ ಉದ್ಯಮವನ್ನೇ ನೆಚ್ಚಿಕೊಂಡ ಕರಾವಳಿ ಭಾಗದ ಅದೆಷ್ಟೋ ಕುಟುಂಬಗಳಿಗೆ ಸಹಾಯವಾಗಲಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »