ಇನ್ನಷ್ಟು ಅಗ್ಗವಾದ ಮಾರುತಿ ಆಲ್ಟೊ ಕೆ10: ಹಬ್ಬದ ಸೀಸನ್‌ನ್ನಲ್ಲಿ ಕಾರು ಖರೀದಿಸುವವರಿಗೆ ಗುಡ್‌ ನ್ಯೂಸ್‌!

Alto K10 Car Price: ಭಾರತದಲ್ಲಿ ಈಗ ಹಬ್ಬದ ಸೀಸನ್‌. ಈ ಸೀಸನ್‌ ಬಂತೆಂದರೆ ಪ್ರತಿಯೊಬ್ಬರು ತಮ್ಮ ಮನೆಗೆ ಅಗತ್ಯವಿರುವ ವಸ್ತುಗಳ ಖರೀದಿಗೆ ಯೋಜನೆಗಳನ್ನು ರೂಪಿಸುತ್ತಾರೆ. ‌

ಭಾರತ ಸರ್ಕಾರವು ಹೊಸ ಜಿಎಸ್‌ಟಿ 2.0 ದರಗಳನ್ನ ಘೋಷಿಸಿರುವುದರಿಂದ ಈ ವರ್ಷದ ಹಬ್ಬದ ಖರೀದಿ ವಿಶೇಷ ಎನಿಸಲಿದೆ. ಬಹಳಷ್ಟು ಜನರು ದಸರಾ, ದೀಪಾವಳಿಯಲ್ಲಿ ಹೊಸ ವಾಹನ ಕೊಳ್ಳಲು ಮುಂದಾಗುತ್ತಾರೆ.

ಏಕೆಂದರೆ ಹಬ್ಬದ ಸಂದರ್ಭದಲ್ಲಿ ಖರೀದಿ ಮಾಡಿದರೆ ಒಳ್ಳೆಯದಾಗುತ್ತದೆ ಎಂಬ ಭಾವನೆ. ಈಗ ಸಣ್ಣ ಕಾರುಗಳ ಮೇಲಿನ ತೆರಿಗೆಯನ್ನು 28% ದಿಂದ 18%ಕ್ಕೆ ಇಳಿಸಲಾಗಿದೆ. ದೊಡ್ಡ ಕಾರಿನ ಮೇಲಿನ ತೆರಿಗೆಯನ್ನು 40%ಕ್ಕೆ ಇಳಿಸಲಾಗಿದೆ.

ಇದರಿಂದ ಸಣ್ಣ ಕಾರುಗಳ ಬೆಲೆ ಗಣನೀಯವಾಗಿ ಕಡಿಮೆಯಾಗಿದೆ. ಈ ಹಬ್ಬದ ಋತುವಿನಲ್ಲಿ ನೀವೂ ಕಾರು ಖರೀದಿಸಬೇಕೆಂದರೆ ಮಾರುತಿಯ ಆಲ್ಟೊ ಕೆ10 ಅತ್ಯುತ್ತಮ ಆಯ್ಕೆಯಾಗಬಲ್ಲದು.

ಕಂಪನಿಯು ಅರೆನಾ ಮತ್ತು ನೆಕ್ಸಾ ಡೀಲರ್‌ಶಿಪ್‌ಗಳ ಮೂಲಕ ಕಾರುಗಳನ್ನು ಮಾರಾಟ ಮಾಡುತ್ತಿದೆ. ಈ ಎರಡು ಡೀಲರ್‌ಶಿಪ್‌ಗಳ ವಾಹನಗಳ ಬೆಲೆಯನ್ನು 1.30 ಲಕ್ಷದವರೆಗೆ ಕಡಿಮೆ ಮಾಡಲಾಗಿದೆ. ಹಾಗಾಗಿ ಇದು ಮೊದಲಿಗಿಂತಲೂ ಹೆಚ್ಚು ಕೈಗೆಟುಕುವಂತಿದೆ.

ಮಾರುತಿ ಆಲ್ಟೊ ಕೆ10 ಕಾರು ಭಾರತದಲ್ಲಿ ಹೆಚ್ಚು ಮಾರಾಟ ಕಂಡ ಕಾರುಗಳಲ್ಲೊಂದು. ಇದು ಹ್ಯಾಚ್‌ಬ್ಯಾಕ್‌ ಕಾರ್‌ ಆಗಿದ್ದು, ಸಣ್ಣ ಕುಟುಂಬಕ್ಕೆ ಹಾಗೂ ಕಡಿಮೆ ಪಾರ್ಕಿಂಗ್‌ ಜಾಗಕ್ಕೆ ಹೆಚ್ಚು ಹೊಂದಿಕೆಯಾಗುವ ಕಾರಾಗಿದೆ.

ಮಾರುತಿ ಸುಜುಕಿ ಕಂಪನಿಯು ಈ ಕಾರಿನ ಬೆಲೆಯನ್ನು ಇನ್ನಷ್ಟು ಅಗ್ಗವಾಗಿಸಿದೆ. ಆಲ್ಟೊ ಕೆ10 ಕಾರಿನ ಬೆಲೆಯು 1,07,600ರೂ. ಗಳಷ್ಟು ಕಡಿಮೆಯಾಗಿದೆ.

ಇದರಿಂದ ಮಾರುತಿಯ ಈ ಕಾರು ಮಧ್ಯಮ ವರ್ಗದವರಿಗೆ ಸುಲಭವಾಗಿ ಕೈಗಟುಕುವಂತಾಗಿದೆ. ಹಾಗಾದರೆ ಈ ಕಾರಿನ ವೈಶಿಷ್ಟ್ಯವೇನು ಎಂದು ತಿಳಿಯೋಣ.

ಇದನ್ನೂ ಓದಿ: ಕೈಗಟಕುವ ದರದಲ್ಲಿ ಮಾರುಕಟ್ಟೆಗೆ ಬಂದ ಮಾರುತಿ ಸುಜುಕಿಯ ಅತ್ಯಂತ ಸೇಫ್ ಕಾರು: ವಿಕ್ಟೋರಿಸ್ ಕಾರುಗಳ ದರ ಪಟ್ಟಿ ಹೀಗಿದೆ

ಮಾರುತಿ ಸುಜುಕಿ ಆಲ್ಟೊ ಕೆ10 ವೈಶಿಷ್ಟ್ಯ

ಎಂಜಿನ್‌: ಆಲ್ಟೊ ಕೆ10 ಕಾರು 1 ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, ಇದು 67 ಪಿಎಸ್ ಪವರ್ ಮತ್ತು 89 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದರ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಎಮ್‌ಟಿ ಗೇರ್‌ ಬಾಕ್ಸ್‌ಗೆ ಜೋಡಿಸಲಾಗಿದೆ.

ಮೈಲೇಜ್‌: ಆಲ್ಟೊ ಕೆ10 ಕಾರು ಒಂದು ಲೀಟರ್ ಪೆಟ್ರೋಲ್‌ನಲ್ಲಿ 24.39 ಕಿಮೀ ಮೈಲೇಜ್ ಮತ್ತು ಒಂದು ಕೆಜಿ ಸಿಎನ್‌ಜಿಯಲ್ಲಿ 33.40 ಕಿಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ವೈಶಿಷ್ಟ್ಯಗಳು: ಇದು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕೀಲೆಸ್ ಎಂಟ್ರಿ, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು, ಅಡ್ಜೆಸ್ಟ್‌ ಮಾಡಬಹುದಾದ ಹೊರಗಿನ ರಿಯರ್ ವ್ಯೂ ಮಿರರ್, 6 ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ರಿವರ್ಸಿಂಗ್ ಕ್ಯಾಮೆರಾ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಈ ವೈಶಿಷ್ಟ್ಯಗಳನ್ನು ನೋಡಿದಾಗ ಇದು ಸುರಕ್ಷತೆಯನ್ನು ಕೂಡಾ ನೀಡುವ ಕಾರು ಎಂದು ಹೇಳಬಹುದು.

ಬಣ್ಣಗಳು: ಮೆಟಾಲಿಕ್ ಸಿಜ್ಲಿಂಗ್ ರೆಡ್, ಮೆಟಾಲಿಕ್ ಸಿಲ್ಕಿ ಸಿಲ್ವರ್, ಮೆಟಾಲಿಕ್ ಗ್ರಾನೈಟ್ ಗ್ರೇ, ಮೆಟಾಲಿಕ್ ಸ್ಪೀಡಿ ಬ್ಲೂ, ಪ್ರೀಮಿಯಂ ಅರ್ಥ್ ಗೋಲ್ಡ್, ಪರ್ಲ್ ಮಿಡ್‌ನೈಟ್ ಬ್ಲ್ಯಾಕ್ ಮತ್ತು ಸಾಲಿಡ್ ವೈಟ್ ಬಣ್ಣಗಳಲ್ಲಿ ಈ ಕಾರನ್ನು ಖರೀದಿಸಬಹುದಾಗಿದೆ.

ರೂಪಾಂತರಗಳು: std, LXi, VXi, ಮತ್ತು VXi ಪ್ಲಸ್‌ ಈ ನಾಲ್ಕು ರೂಪಾಂತರಗಳಲ್ಲಿ ಕಾರನ್ನು ಖರೀದಿಸಬಹುದಾಗಿದೆ.

ಇದನ್ನೂ ಓದಿ: GST 2.0 ನಂತರ ಗ್ರಾಹಕರ ಬೇಡಿಕೆಯಿಂದ ನಂ.1 ಸ್ಥಾನಕ್ಕೇರಿದ್ದ ಸ್ಕೋಡಾ ಕಾರುಗಳ ಬೆಲೆ ಎಷ್ಟು? ಇಲ್ಲಿದೆ ಪಟ್ಟಿ

(Maruti Suzuki Alto K10 Car now more affordable after cut of GST rate)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.