ಗೋಶಾಲೆಗೆ ಜಲಸಂಪರ್ಕ ನೆರವಿಗಾಗಿ ಯಕ್ಷಗಾನ ಪ್ರದರ್ಶನ

ಉಡುಪಿ: ಉಡುಪಿ ಜಿಲ್ಲೆಯ ನಾದನೂಪುರ ಯಕ್ಷೋತ್ಥಾನ ಟ್ರಸ್ಟ್, ವಂಡಾರು ಸಂಸ್ಥೆ ಯಕ್ಷಗಾನ ಶಿಕ್ಷಣ ಹಾಗೂ ಪ್ರದರ್ಶನ ಚಟುವಟಿಕೆಗಳಲ್ಲಿ ಕಳೆದ ಹಲವು ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಇದೀಗ ಸಂಸ್ಥೆಯು ಬ್ರಹ್ಮಾವರ ತಾಲೂಕಿನ ನಂಚಾರಿನಲ್ಲಿರುವ ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ (ರಿ) ಗೋಶಾಲೆಗೆ ಜಲಸಂಪರ್ಕ ಕಲ್ಪಿಸುವ ಉದ್ದೇಶದಿಂದ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಿದೆ.
ಅನಾಥ ಗೋವುಗಳ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಕಾಮಧೇನು ಗೋಶಾಲೆಗೆ ಶಾಶ್ವತ ಜಲಸಂಪರ್ಕ ಅತ್ಯಗತ್ಯವಾಗಿದ್ದು, ಈ ಅಗತ್ಯವನ್ನು ಮನಗಂಡು ನಾದನೂಪುರ ಯಕ್ಷೋತ್ಥಾನ ಟ್ರಸ್ಟ್ ಗೋಶಾಲೆಯ ನೆರವಿಗೆ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಫೆಬ್ರವರಿ 1, 2026 (ಭಾನುವಾರ) ಮಧ್ಯಾಹ್ನ 2ರಿಂದ ಮೈರ್‌ಕೊಮೆಯ ಸಪ್ತಪದಿ ಕನ್ವೆನ್ಶನ್ ಹಾಲ್‌ನಲ್ಲಿ ಶುಭಾಶಯ ಜೈನ್ ವಿರಚಿತ ‘ಹನುಮ ಕಲ್ಯಾಣ’ ಯಕ್ಷಗಾನ ಆಖ್ಯಾನದ ಪ್ರದರ್ಶನ ನಡೆಯಲಿದೆ ಎಂದು ಎನ್.ವೈಟಿ. ವಂಡಾರು ಸಂಸ್ಥೆಯ ಸ್ಥಾಪಕಾಧ್ಯಕ್ಷ ಶ್ರೀ ಗೋವಿಂದ ವಂಡಾರು ತಿಳಿಸಿದ್ದಾರೆ.

ಇದನ್ನೂ ಓದಿ: ಸಾಲು ಸಾಲು ರಜೆ ಹಿನ್ನೆಲೆ ಸಾರಿಗೆ ಇಲಾಖೆಯಿಂದ ಬಂಪರ್​ ಆಫರ್​ : ರಸ್ತೆಗಿಳಿಯಲಿವೆ ಹೆಚ್ಚುವರಿ ಬಸ್​ಗಳು

ಯಕ್ಷಗಾನ ಪ್ರದರ್ಶನದಲ್ಲಿ ಭಾಗವತರಾಗಿ ಪ್ರಸನ್ನ ಭಟ್ ಬಾಳ್ಕಲ್, ಮದ್ದಳೆಯಲ್ಲಿ ರಾಘವೇಂದ್ರ ಯಲ್ಲಾಪುರ, ಚೆಂಡೆಯಲ್ಲಿ ಸುಜನ್ ಹಾಲಾಡಿ ಭಾಗವಹಿಸಲಿದ್ದಾರೆ. ಮುಮ್ಮೇಳದಲ್ಲಿ ದೂರ್ವಾಸ ಮುನಿಯಾಗಿ ಎಂ.ಕೆ. ರಮೇಶ್ ಆಚಾರ್ಯ, ಕೇಸರಿಯಾಗಿ ಪ್ರಸನ್ನ ಶೆಟ್ಟಿಗಾರ್, ಹನುಮಂತನಾಗಿ ಕಿರಾಡಿ ಪ್ರಕಾಶ, ಅಂಜನೆಯಾಗಿ ಗೋವಿಂದ ವಂಡಾರು, ಪುಂಜಿಕಸ್ಥಳೇಯಾಗಿ ಸುಧೀರ್ ಉಪ್ಪೂರು, ಶಂಭಸಾಧನನಾಗಿ ರಾಘವೇಂದ್ರ ಉಳ್ಳೂರು, ಹಾಸ್ಯಭಾಗದಲ್ಲಿ ಸತೀಶ್ ಹಟ್ಟಿಯಂಗಡಿ ಮತ್ತು ಕಾರ್ತಿಕ್ ಪಾಂಡೇಶ್ವರ ಸೇರಿದಂತೆ ಇತರ ಕಲಾವಿದರು ಭಾಗವಹಿಸಲಿದ್ದಾರೆ.

Exit mobile version