ಯಕ್ಷಗಾನ ಕಲಾರಂಗದ 86ನೇ ಮನೆ ‘ಲಲಿತಾ ಸದನ’ ಹಸ್ತಾಂತರ

ಉಡುಪಿ : Yakshagana Kalaranga: ಯಕ್ಷಗಾನ ಕಲಾರಂಗ ಸಂಸ್ಥೆಯ 86ನೇ ಮನೆ ಯೋಜನೆಯಡಿ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ನೂತನ ‘ಲಲಿತಾ ಸದನ’ ಮನೆ ಹಸ್ತಾಂತರ ಕಾರ್ಯಕ್ರಮ ಫೆ.3ರಂದು ನಡೆಯಿತು. ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ನಿಸರ್ಗ ಅವರಿಗೆ, ಕಿದಿಯೂರು ಎಸ್‌ವಿಎಸ್‌ಟಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಎ. ಭಾಸ್ಕರ ಭಟ್ ಅವರ ಪ್ರಾಯೋಜಕತ್ವದಲ್ಲಿ ರೂ.7 ಲಕ್ಷ ವೆಚ್ಚದಲ್ಲಿ ಈ ಮನೆ ನಿರ್ಮಿಸಲಾಗಿದೆ.

ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಮನೆ ಉದ್ಘಾಟಿಸಿದರು. ಅನುಗ್ರಹ ಸಂದೇಶದಲ್ಲಿ, ಯಕ್ಷಗಾನ ಕಲಾರಂಗ ಉಡುಪಿ(Udupi) ಜಿಲ್ಲೆಯ ಹೆಮ್ಮೆಯ ಸಂಸ್ಥೆಯಾಗಿದ್ದು, ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಸಾಮಾಜಿಕ ಸೇವೆಯಲ್ಲಿ ನಡೆಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಪಾರದರ್ಶಕ ಕಾರ್ಯವೈಖರಿಯಿಂದ ಸಮಾಜದ ವಿಶ್ವಾಸ ಗಳಿಸಿರುವ ಈ ಸಂಸ್ಥೆ ಎಲ್ಲರಿಗೂ ಮಾದರಿ ಎಂದು ಹೇಳಿದರು.

ಪ್ರಾಯೋಜಕ ಎ. ಭಾಸ್ಕರ ಭಟ್ ಮಾತನಾಡಿ, ಕಲಾರಂಗದ ಸದಸ್ಯನಾಗಿರುವುದು ನನಗೆ ಹೆಮ್ಮೆ. ಯಕ್ಷಗಾನ ಸಂರಕ್ಷಣೆ ಜೊತೆಗೆ ಸಮಾಜ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಂಸ್ಥೆ ಮಾಡುತ್ತಿರುವ ಕಾರ್ಯಗಳು ಅಚ್ಚರಿ ಮೂಡಿಸುತ್ತವೆ. ಮನೆ ನಿರ್ಮಾಣಕ್ಕೆ ಅವಕಾಶ ನೀಡಿದಕ್ಕಾಗಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು ಹಾಗೂ ಮುಂದುವರಿದು ವಿದ್ಯಾಪೋಷಕ್‌ಗೆ ವಾರ್ಷಿಕ ನೆರವು ನೀಡುವುದಾಗಿ ಘೋಷಿಸಿದರು.

Also Read: ಶೆಟ್ರಕಟ್ಟೆ ಬಸ್ ಅಪಘಾತಕ್ಕೆ ಒಳಗಾದ ವಿದ್ಯಾರ್ಥಿನಿಯರಿಗೆ ಕಾಲೇಜಿನಿಂದ ಸಹಾಯಧನ

ಕಾರ್ಯಕ್ರಮದಲ್ಲಿ ವಿದ್ಯಾಸಮುದ್ರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಗುಂಡು ಬಿ. ಅಮಿನ್, ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ ಉಪಸ್ಥಿತರಿದ್ದರು. ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ. ಭಟ್, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸೇರಿದಂತೆ ಹಲವು ಸದಸ್ಯರು ಹಾಗೂ ಹಿತೈಷಿಗಳು ಭಾಗವಹಿಸಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ನಾರಾಯಣ ಎಂ. ಹೆಗಡೆ ವಂದಿಸಿದರು.

Exit mobile version