ಉಡುಪಿ : ವರದಕ್ಷಿಣೆ ಕಿರುಕುಳ,ಹಲ್ಲೆ ಕೊಲೆ ಬೆದರಿಕೆ : ಪತಿ ಸೇರಿ 7 ಮಂದಿ ವಿರುದ್ದ ಎಫ್‌ಐಆರ್‌

Udupi : ವರದಕ್ಷಿಣೆಗಾಗಿ ಕಿರುಕುಳ ನೀಡಿ, ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಪತಿ ಸೇರಿದಂತೆ 7 ಮಂದಿಯ ವಿರುದ್ದ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀರಕ್ಷಾ (29 ವರ್ಷ) ಎಂಬುವವರು ಸಂತೆಕಟ್ಟೆಯ ದೀಪರ್‌ರಾಜ್‌ ಎಂಬವರ ಜೊತೆಗೆ 2022ರ ಡಿಸೆಂಬರ್ 18ರಂದು ಬ್ರಹ್ಮಾವರದಲ್ಲಿ ಮದುವೆ ಆಗಿದ್ದರು.ಮದುವೆಯಾದ ಒಂದು ತಿಂಗಳ ನಂತರ, ಪತಿ ದೀಪಕ್ ರಾಜ್ ಅವರು ಶ್ರೀರಕ್ಷಾ ಅವರನ್ನು ವೈಯಕ್ತಿಕವಾಗಿ ನಿಂದಿಸಲು ಪ್ರಾರಂಭಿಸಿದ್ದಾರೆ.

“ನಿನ್ನೊಂದಿಗೆ ಸಂಸಾರ ನಡೆಸಲು ಆಗಲ್ಲ, ನಿಮ್ಮ ತಂದೆ-ತಾಯಿ ಸಾಕಷ್ಟು ವರದಕ್ಷಿಣೆ ನೀಡಿಲ್ಲ, ಮದುವೆ ಶ್ರೀಮಂತವಾಗಿ ಮಾಡಿಲ್ಲ. ನಿನ್ನನ್ನು ಕಟ್ಟಿಕೊಂಡು ತಪ್ಪು ಮಾಡಿದೆ” ಎಂದು ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಠಾಣೆಗೆ ದೂರು ನೀಡಲಾಗಿದೆ.

ಇದನ್ನೂ ಓದಿ : Yakshagana: ಯಕ್ಷಗಾನ ಒಂದು ಶ್ರೀಮಂತ ಕಲೆ – ಕೃಷ್ಣ ಪೂಜಾರಿ ಚಕ್ರಮಕ್ಕಿ

2023ರ ಫೆಬ್ರವರಿಯಲ್ಲಿ ಪೂನಾದ ಬಾಡಿಗೆ ಫ್ಲ್ಯಾಟ್‌ಗೆ ಕರೆದುಕೊಂಡು ಹೋದ ನಂತರ, ದೀಪಕ್ ರಾಜ್ ಮತ್ತು ಆತನ ಕುಟುಂಬದ ಸದಸ್ಯರಾದ ದೇವರಾಜ್ ಆಚಾರ್ಯ, ಶಾಂತಾ ದೇವರಾಜ್ ಆಚಾರ್ಯ, ಜ್ಯೋತಿಪ್ರಭ, ಕಾಂತಿಪ್ರಭ, ಸಂದೀಪ್ ಮತ್ತು ಉಮಾಶ್ರೀ ಅವರು ಸೇರಿ ಶ್ರೀರಕ್ಷಾ ಅವರಿಗೆ ಅವಾಚ್ಯವಾಗಿ ಬೈದು ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

2024ರ ಫೆಬ್ರವರಿ 10ರಂದು ದೀಪಕ್ ರಾಜ್ ಅವರು ಶ್ರೀರಕ್ಷಾ ಅವರನ್ನು ತವರು ಮನೆಗೆ ಬಿಟ್ಟು ಹೋಗಿ, ಮೆಸೇಜ್ ಮೂಲಕ “ನೀನು ನನಗೆ ಬೇಡ, ನಿನ್ನ ಮುಖ ನೋಡಲು ಇಷ್ಟವಿಲ್ಲ. ನೀನು ಪೂನಾಕ್ಕೆ ಬಂದರೆ ನನ್ನ ಹೆಣ ನೋಡಬೇಕು” ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಫೋನ್ ಕರೆ ಮಾಡಿ ತನಗೆ ಮತ್ತು ತನ್ನ ತಂದೆಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ದೂರು ನೀಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ : ಬ್ರಹ್ಮಾವರ : ಅಕ್ರಮ ಮರಳುಗಾರಿಕೆ, ಓರ್ವ ಅರೆಸ್ಟ್‌

ಈ ಕುರಿತು ಉಡುಪಿ (Udupi) ಮಹಿಳಾ ಪೊಲೀಸ್‌ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 85, 352, 351 (2) ಜೊತೆಗೆ 3 (5) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Exit mobile version