ಉಡುಪಿ: tourist boat capsizes: ಉಡುಪಿ(Udupi) ಜಿಲ್ಲೆಯ ಮಲ್ಪೆ ಡೆಲ್ಟಾ ಬೀಚ್ ಸಮೀಪದ ನದಿ–ಸಮುದ್ರ ಸಂಗಮ ಪ್ರದೇಶದಲ್ಲಿ ಇಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಪ್ರವಾಸಿ ದೋಣಿಯೊಂದು ಉರುಳಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಲ್ಪೆ–ಕೋಟ ಪೊಲೀಸ್ ಠಾಣಾ ಗಡಿ ವ್ಯಾಪ್ತಿಯ ಹಂಗಾರಕಟ್ಟೆ ಶಿಪ್ ಬಿಲ್ಡಿಂಗ್ ಪ್ರದೇಶದ ಬಳಿ ಈ ದುರ್ಘಟನೆ ಸಂಭವಿಸಿದೆ. 15–20 ಪ್ರಯಾಣಿಕರ ಸಾಮರ್ಥ್ಯದ ಈ ದೋಣಿಯಲ್ಲಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಅಪಘಾತಕ್ಕೆ ಒಳಗಾದ ದೋಣಿ ವೇವ್‌ರೈಡರ್ಸ್ ಕಂಪನಿಗೆ ಸೇರಿದೆ ಎನ್ನಲಾಗಿದೆ
ಬಚಾವಾದ ಪ್ರಯಾಣಿಕನೊಬ್ಬನ ಹೇಳಿಕೆ ಪ್ರಕಾರ, ಎಲ್ಲ ಪ್ರಯಾಣಿಕರಿಗೆ ಲೈಫ್ ಜಾಕೆಟ್ ನೀಡಲಾಗಿದ್ದರೂ, ಎಲ್ಲರೂ ಅದನ್ನು ಧರಿಸಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ವಿಚಾರ ಇನ್ನೂ ಅಧಿಕೃತ ದೃಢೀಕರಣಕ್ಕೆ ಒಳಪಡಬೇಕಿದೆ.
ಅಪಘಾತದ ಬಳಿಕ ಸ್ಥಳದಲ್ಲಿದ್ದ ಇತರ ದೋಣಿಗಳ ಸಹಾಯದಿಂದ ಎಲ್ಲಾ ಪ್ರಯಾಣಿಕರನ್ನು ಕರಾವಳಿಗೆ ರಕ್ಷಿಸಿ ಕರೆತರಲಾಗಿದ್ದು, ಇವರಲ್ಲಿ ನಾಲ್ವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ನಂತರ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ.
Also Read: ಕೋಡಿ ಬೆಂಗ್ರೆ : ಪ್ರವಾಸಿಗರ ದೋಣಿ ಸಮುದ್ರದಲ್ಲಿ ಪಲ್ಟಿ – ಇಬ್ಬರ ಸ್ಥಿತಿ ಗಂಭೀರ
ಮೃತರನ್ನು ಶಂಕರಪ್ಪ (22) ಹಾಗೂ ಸಿಂಧು (23) ಎಂದು ಗುರುತಿಸಲಾಗಿದ್ದು, ದೀಶಾ (26) ಅತಿಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಧರ್ಮರಾಜ (26) ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಪ್ರಯಾಣಿಕರೆಲ್ಲರೂ ಮೈಸೂರು ಜಿಲ್ಲೆಯ ಸರಸ್ವತಿಪುರಂ ಮೂಲದವರಾಗಿದ್ದು, ಅಲ್ಲಿನ ಖಾಸಗಿ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ತಂಡವಾಗಿದ್ದರು ಎಂದು ತಿಳಿದುಬಂದಿದೆ.
ಘಟನೆಯ ನಿಖರ ಕಾರಣ, ಸುರಕ್ಷತಾ ಕ್ರಮಗಳ ಪಾಲನೆ ಹಾಗೂ ದೋಣಿ ಸಂಚಾಲಕರ ಜವಾಬ್ದಾರಿ ಕುರಿತು ತನಿಖೆ ನಡೆಯುತ್ತಿದೆ. ಮಲ್ಪೆ ಮತ್ತು ಕೋಟ ಪೊಲೀಸ್ ಠಾಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
