ಕಾರ್ಕಳ : ಹಾಡುಹಗಲೇ ಬೀಗ ಒಡೆದು ಮನೆ ದರೋಡೆ, 6.5 ಲಕ್ಷ ರೂ. ಮೌಲ್ಯದ ಚಿನ್ನ, ಸೊತ್ತು ಕಳವು

Karkala news (ಕಾರ್ಕಳ) : ಹಾಡುಹಗಲಲ್ಲೇ ಮನೆಯ ಬೀಗ ಒಡೆದು ಮನೆ ದರೋಡೆ ನಡೆಸಿ 6.5 ಲಕ್ಷ ರೂ. ಮೌಲ್ಯದ ಚಿನ್ನ, ಸೊತ್ತು ಕಳವು ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆ ಎಂಬಲ್ಲಿ ನಡೆದಿದೆ.

ಮನೆಯ ಮಾಲೀಕರಾದ ಸಾತುರ್ನಿನ್ ಮಥಾಯಸ್‌ (70 ವರ್ಷ) ಅವರು ತಮ್ಮ ಮನೆಗೆ ಬೀಗ ಹಾಕಿ ಲೇಹ್‌ಗೆ ತೆರಳಿದ್ದರು. ಅವರ ಪತ್ನಿ ಕೂಡ ಕಾರ್ಕಳದ ಬಂಗ್ಲೆಗುಡ್ಡೆ ಅತ್ತಿಗೆ ಮನೆಗೆ ಹೋಗಿದ್ದರು. ಅಕ್ಟೋಬರ್ 1, 2025 ರಂದು ಮಧ್ಯಾಹ್ನ 1.20 ಗಂಟೆಗೆ ವಾಪಸ್ ಬಂದಾಗ, ಮನೆಯ ಎದುರಿನ ಬಾಗಿಲಿನ ಬೀಗ ಮುರಿದು ಕಳ್ಳರು ಒಳ ನುಗ್ಗಿದ್ದು ಪತ್ತೆಯಾಗಿದೆ.

ಇದನ್ನೂ ಓದಿ: ಬೈಂದೂರಿನಲ್ಲಿ ವಿಚಿತ್ರ ಕಳವು ಪ್ರಕರಣ : ಕಳವಾದ ಬೈಕ್‌ ಪತ್ತೆ, 2ನೇ ಬಾರಿ ಮತ್ತೆ ಬೈಕ್‌ ಕಳವು

ಕಳ್ಳರು ಮನೆಯ ಬೆಡ್‌ರೂಂನಲ್ಲಿದ್ದ ಕಬ್ಬಿಣದ ಕಪಾಟನ್ನು ಪಿಕ್ಕಾಸಿನಿಂದ ಒಡೆದು ಹಾಕಿದ್ದಾರೆ. ಕಪಾಟಿನಲ್ಲಿ ಇಟ್ಟಿದ ಸುಮಾರು 1,50,000 ರೂಪಾಯಿ ಹಣ ಹಾಗೂ ನೆಕ್ಲೆಸ್, ಬಳೆಗಳು, ಚೈನ್‌ಗಳು, ಕಿವಿಯ ರಿಂಗ್‌ ಸೇರಿದಂತೆ ಒಟ್ಟು 73 ಗ್ರಾಂ ತೂಕದ ವಿವಿಧ ಚಿನ್ನಾಭರಣ, ವಜ್ರದ ಪೆಂಡೆಂಟ್, ಚಿನ್ನದ ಚೈನ್‌ ಹಾಗೂ ಮುತ್ತಿನ ಹಾರವನ್ನು ಕಳವು ಮಾಡಲಾಗಿದೆ.

ಅಲ್ಲದೇ 1,000 ಮೌಲ್ಯದ ಅಮೆರಿಕನ್ ಡಾಲರ್‌ಗಳು ಮತ್ತು ₹500 ಮೌಲ್ಯದ ಬ್ರಿಟೀಷ್ ಪೌಂಡ್‌ಗಳನ್ನು ಸಹ ಕಳ್ಳರು ದೋಚಿದ್ದಾರೆ. ಮನೆಯಲ್ಲಿ ಒಟ್ಟು 6.5 ಲಕ್ಷ ರೂಪಾಯಿ ಮೌಲ್ಯದ ಸೊತ್ತು ಕಳವು ಆಗಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಉಡುಪಿ: ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ₹17 ಲಕ್ಷ ರೂ. ವಂಚನೆ

ಈ ಕುರಿತು ಕಾರ್ಕಳ (Karkala )ನಗರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಕಳ್ಳರ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.

Exit mobile version