ಜುಲೈ 31ರ ವರೆಗೆ ಶಿಕ್ಷಕರಿಗೆ ವರ್ಕ್ ಫ್ರಂ ಹೋಮ್

ಬೆಂಗಳೂರು : ದೇಶದಾದ್ಯಂತ ಕೊರೊನಾ ಮಹಾಮಾರಿಯ ಆರ್ಭಟ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಜುಲೈ 31ರ ವರೆಗೆ ಶಿಕ್ಷಕರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ವರ್ಕ್ ಫ್ರಮ್ ಹೋಮ್ ಕೈಗೊಳ್ಳುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ ಆದೇಶ ಹೊರಡಿಸಿದೆ.

ದೇಶದಾದ್ಯತ ಅನ್ ಲಾಕ್ -2 ಮಾರ್ಗಸೂಚಿ ಜಾರಿಯಲ್ಲಿದೆ. ಕೊರೊನಾ ಸೋಂಕು ಹರಡುವಿಕೆಯ ಭೀತಿಯಿಂದ ಶೈಕ್ಷಣಿಕ ಸಂಸ್ಥೆಗಳ ಆರಂಭದ ಮೇಲಿನ ನಿಷೇಧವನ್ನು ಜುಲೈ 31ರ ವರೆಗೆ ಮುಂದುವರಿಸಿದೆ. ಯಾವುದೇ ಕಾರಣಕ್ಕೂ ಶಾಲೆ, ಕಾಲೇಜು, ತರಬೇತಿ ಸಂಸ್ಥೆಗಳು, ಹಾಸ್ಟೆಲ್ ಗಳನ್ನು ತೆರೆಯುವಂತಿಲ್ಲ ಎಂದು ಖಡಕ್ ಆದೇಶವನ್ನು ಹೊರಡಿಸಿದೆ.

ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಕರ್ತವ್ಯವನ್ನು ನಿರ್ವಹಿಸುವ ಉಪನ್ಯಾಸಕರು, ಶಿಕ್ಷಕರು, ಬೋಧಕರು, ಬೋಧಕೇತರರು, ಹಾಸ್ಟೆಲ್ ಸಿಬ್ಬಂದಿಗಳು ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಆದೇಶ ಹೊರಡಿಸಿದೆ. ಈ ಕುರಿತು ಎಲ್ಲಾ ರಾಜ್ಯ ಸರಕಾರಗಳಿಗೆ ಕೇಂದ್ರ ಸರಕಾರ ಸೂಚನೆಯನ್ನು ನೀಡಿದ್ದು, ಈ ಕುರಿತು ಕ್ರಮಕೈಗೊಳ್ಳುವಂತೆ ಹೇಳಿದೆ.

ಕೊರೊನಾ ಸೋಂಕು ಹರಡುವಿಕೆಯ ನಡುವಲ್ಲೇ ರಾಜ್ಯ ಸರಕಾರ ಕೇಂದ್ರ ಸರಕಾರ ಹೊರಡಿಸಿರುವ ಅನ್ ಲಾಕ್-2 ಮಾರ್ಗಸೂಚಿಯನ್ನು ಯಥಾವತ್ತಾಗಿ ಜಾರಿಗೆ ತಂದಿದೆ. ಶೈಕ್ಷಣಿಕ ಸಂಸ್ಥೆಗಳನ್ನು ಜುಲೈ 31ರ ವರೆಗೆ ತೆರೆಯುವಂತಿಲ್ಲ ಎಂಬ ಆದೇಶವನ್ನು ಹೊರಡಿಸಿದ್ದು, ಕಾಲೇಜುಗಳ ಉಪನ್ಯಾಸಕರಿಗೆ ರಜೆಯನ್ನು ಘೋಷಿಸಿದೆ.

ಆದರೆ ಕೊರೊನಾ ಭೀತಿಯ ನಡುವಲ್ಲೇ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಶಾಲೆಗಳಿಗೆ ಹಾಜರಾಗುತ್ತಿದ್ದಾರೆ. ಕೇಂದ್ರ ಸರಕಾರ ಆದೇಶ ಹೊರಡಿಸಿದ್ದರು ಕೂಡ ರಾಜ್ಯ ಸರಕಾರವಾಗಲಿ, ಸಾರ್ವಜನಿಕ ಶಿಕ್ಷಣ ಇಲಾಖೆ ವರ್ಕ್ ಫ್ರಂ ಹೋಮ್ ಘೋಷಣೆ ಮಾಡದಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶಿಕ್ಷಕರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here