ರಾಜ್ಯದಲ್ಲಿ ಮತ್ತೆ ಸದ್ದು ಮಾಡಿದ ಸಂಕ್ರಾಂತಿ ಕ್ರಾಂತಿ : ಸಿಎಂ, ಡಿಸಿಎಂಗೆ ದೆಹಲಿಗೆ ಬುಲಾವ್​

ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ನವೆಂಬರ್​ ಕ್ರಾಂತಿ ಚಳಿಗಾಲದ ಅಧಿವೇಶನದ ಬಳಿಕ ತಣ್ಣಗಾಗಿತ್ತು. ಆದರೂ ತೆರೆ ಮರೆಯಲ್ಲಿ ರಾಜ್ಯ ಕಾಂಗ್ರೆಸ್​ ನಾಯಕರು ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಲೇ ಇದ್ದರು. ಇದೀಗ ಮತ್ತೊಮ್ಮೆ ರಾಜ್ಯದಲ್ಲಿ ಸಂಕ್ರಾಂತಿ ಕ್ರಾಂತಿ ಸದ್ದು ಮಾಡುತ್ತಿದ್ದು ಮುಂದಿನ ವಾರದಿಂದ ಮತ್ತೊಮ್ಮೆ ಅಧಿಕಾರ ಹಸ್ತಾಂತರ ವಿಚಾರ ದೆಹಲಿಯಲ್ಲಿ ಸದ್ದು ಮಾಡಲಿದೆ ಎನ್ನಲಾಗಿದೆ.
ಸದ್ಯ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಿದೇಶಿ ಪ್ರವಾಸದಲ್ಲಿದ್ದಾರೆ. ರಾಹುಲ್​ ಗಾಂಧಿ ಭಾರತಕ್ಕೆ ಮರಳುತ್ತಿದ್ದಂತೆಯೇ ಪವರ್​ ಶೇರಿಂಗ್ ವಿಚಾರದ ಬಗ್ಗೆ ಇತ್ಯರ್ಥ ನಡೆಯಲಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಹೈಕಮಾಂಡ್​ ಮುಂದಿನ ವಾರ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್​ಗೆ ಬುಲಾವ್​ ನೀಡಲಿದೆ. ಕಾಂಗ್ರೆಸ್​ ವರಿಷ್ಠರ ಸಮ್ಮುಖದಲ್ಲಿ ಪವರ್​ ಶೇರಿಂಗ್​ ಕಗ್ಗಂಟು ಬಗೆಹರಿಸುವ ಪ್ರಯತ್ನ ನಡೆಯಲಿದೆ.

ಇದನ್ನೂ ಓದಿ: ರಾಹುಲ್‌ ಗಾಂಧಿ ಸ್ವತಃ ಶ್ರೀರಾಮನಿದ್ದಂತೆ! ಕಾಂಗ್ರೆಸ್‌ ನಾಯಕನಿಂದ ಹೊಸ ವಿವಾದ

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್​ ಈಗಾಗಲೇ ಅನೇಕ ಬಾರಿ ದೆಹಲಿಗೆ ಭೇಟಿ ನೀಡಿದ್ದಾರೆ. ಆದರೆ ರಾಹುಲ್​ ಗಾಂಧಿಯನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಸಿಡಬ್ಲುಸಿ ಸಭೆಯಲ್ಲಿ ಸಿದ್ದರಾಮಯ್ಯ – ರಾಹುಲ್​ ಭೇಟಿಯಾಗಿದ್ದರೂ ವೈಯಕ್ತಿಕ ಮಾತುಕತೆ ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಈ ಗೊಂದಲಕ್ಕೆ ತೆರೆ ಎಳೆಯಲು ರಾಹುಲ್​ ಗಾಂಧಿ ಮುಂದಾಗಿದ್ದು ಜನವರಿ 8 ಅಥವಾ 9ರಂದು ದೆಹಲಿಗೆ ಆಹ್ವಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಸಂಧಾನ ಸಭೆಯಲ್ಲಿ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದರ ಕುರಿತು ಸ್ಪಷ್ಟ ಸಂದೇಶ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.

Exit mobile version