ಪರ್ಯಾಯ ಪ್ರಯುಕ್ತ ಶ್ರೀಕೃಷ್ಣ ಮಠಕ್ಕೆ ಮಟ್ಟು ಗುಳ್ಳ ಹೊರೆಕಾಣಿಕೆ ಸಮರ್ಪಣೆ

ಉಡುಪಿ: ಅನಾದಿ ಕಾಲದಿಂದ ನಡೆದು ಬಂದ ಸಂಪ್ರದಾಯದಂತೆ ಕಟಪಾಡಿ ಮಟ್ಟು ಪ್ರದೇಶದಲ್ಲಿ ಬೆಳೆದ ಪ್ರಸಿದ್ಧ ಮಟ್ಟು ಗುಳ್ಳವನ್ನು ಶೀರೂರು ಪರ್ಯಾಯೋತ್ಸವದ ಅಂಗವಾಗಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭಕ್ತಿಪೂರ್ವಕವಾಗಿ ಅರ್ಪಿಸಲಾಯಿತು.
ಉಡುಪಿ ಶ್ರೀಕೃಷ್ಣ ಮಠ ಮತ್ತು ಮಟ್ಟು ಪ್ರದೇಶದಲ್ಲಿ ಬೆಳೆಯುವ ಗುಳ್ಳಕ್ಕೆ ಐತಿಹಾಸಿಕ ಹಾಗೂ ಧಾರ್ಮಿಕ ನಂಟಿದೆ. ಮಟ್ಟು ಪ್ರದೇಶದಲ್ಲಿ ಒಮ್ಮೆ ಗುಳ್ಳ ಕೃಷಿ ಸಂಪೂರ್ಣ ನಾಶವಾದ ಸಂದರ್ಭದಲ್ಲಿ, ಕೃಷ್ಣ ಮಠದ ಯತಿ ವಾದಿರಾಜ ಸ್ವಾಮೀಜಿಗಳು ಮಂತ್ರಿಸಿ ನೀಡಿದ ವಿಶಿಷ್ಟ ಬೀಜದಿಂದ ಪುನಃ ಗುಳ್ಳ ಕೃಷಿ ಆರಂಭವಾಯಿತು ಎಂಬ ಐತಿಹ್ಯ ಇದೆ. ಇದರಿಂದ ಮಟ್ಟು ಪ್ರದೇಶದ ಗುಳ್ಳಕ್ಕೆ ವಿಶಿಷ್ಟ ರುಚಿ ಹಾಗೂ ಆಕರ್ಷಕ ಬಣ್ಣ ದೊರೆತಿದೆ ಎಂದು ನಂಬಲಾಗುತ್ತದೆ. ಈ ಕಾರಣದಿಂದಲೇ ಮಟ್ಟು ಗುಳ್ಳ ಪರ್ಯಾಯ ಸಂದರ್ಭದಲ್ಲಿ ಶ್ರೀಕೃಷ್ಣ ಮಠಕ್ಕೆ ಅರ್ಪಿಸುವ ಪದ್ಧತಿ ಅನಾದಿ ಕಾಲದಿಂದ ನಡೆದುಕೊಂಡು ಬರುತ್ತಿದೆ.
ಶುಕ್ರವಾರ ಮಟ್ಟು ಭಾಗದ ಭಕ್ತರು ಗುಳ್ಳ ತುಂಬಿದ ಬುಟ್ಟಿಗಳನ್ನು ಹೊತ್ತು ಸಂಸ್ಕೃತ ಕಾಲೇಜಿನ ಮುಂಭಾಗದಿಂದ ಭವ್ಯ ಮೆರವಣಿಗೆಯಲ್ಲಿ ರಥಬೀದಿಯ ಮೂಲಕ ಹೊರೆಕಾಣಿಕೆ ಮಂಟಪಕ್ಕೆ ಆಗಮಿಸಿ ಶ್ರೀಕೃಷ್ಣ ಮಠಕ್ಕೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಸಂಚಾಲಕ ಬೈಕಾಡಿ ಸುಪ್ರಸಾದ್ ಶೆಟ್ಟಿ ಅವರು ಭಕ್ತರನ್ನು ಸ್ವಾಗತಿಸಿದರು. ಮಟ್ಟು ಗುಳ್ಳ ದೇಶದಲ್ಲೇ ಜಿಐ ಪೇಟೆಂಟ್ ಪಡೆದ ಮೊದಲ ತರಕಾರಿ ಎಂಬ ಖ್ಯಾತಿಗೂ ಪಾತ್ರವಾಗಿದೆ. ಅಲ್ಲದೆ ಶ್ರೀಕೃಷ್ಣ ಮಠದ ನಿತ್ಯ ಅನ್ನಸಂತರ್ಪಣೆಯಲ್ಲಿಯೂ ಗುಳ್ಳಕ್ಕೆ ವಿಶೇಷ ಸ್ಥಾನವಿದೆ.

ಇದನ್ನೂ ಓದಿ: ಉಡುಪಿ ಪರ್ಯಾಯ ಮಹೋತ್ಸವಕ್ಕೆ ದಿನಗಣನೆ : ಕೃಷ್ಣನೂರಿನಲ್ಲಿ ಬಿಗಿ ಬಂದೋಬಸ್ತ್​

ಹೊರೆಕಾಣಿಕೆ ಸಮರ್ಪಣೆಯಲ್ಲಿ ಮಟ್ಟು ಭಾಗದ ಭಕ್ತರಾದ ಡಾ. ಟಿ.ಎಸ್. ರಾವ್, ಪ್ರದೀಪ್ ರಾವ್, ವಿಷ್ಣು ಪಾಡೀಗಾರ್, ಸುನಿಲ್ ಬಂಗೇರ, ಸರಸ್ವತಿ ಬಂಗೇರ, ಮಟ್ಟಿ ಲಕ್ಷ್ಮೀನಾರಾಯಣ ರಾವ್, ಶ್ರೀಕಾಂತ್ ಉಪಾಧ್ಯಾಯ, ಸಂದೀಪ್ ಮಂಜ, ನರೇಶ್ ಪಾಲನ್, ಸದಾನಂದ ಸುವರ್ಣ, ಜಯ ಪೂಜಾರಿ, ಎಂ. ಲಕ್ಷ್ಮಣ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Exit mobile version