ಸಚಿವ ಪ್ರಿಯಾಂಕ್​ ಖರ್ಗೆ ತವರಿನಲ್ಲೇ ಆರ್​ಎಸ್​ಎಸ್​ ಯಶಸ್ವಿ ಪಥಸಂಚಲನ..!

ಆರ್​ಎಸ್​ಎಸ್​​ನ ಚಟುವಟಿಕೆಗಳಿಗೆ ರಾಜ್ಯದಲ್ಲಿ ಕಡಿವಾಣ ಹಾಕುವ ರಾಜ್ಯ ಸರ್ಕಾರದ ನಿಲುವಿನ ಹಿಂದೆ ಸಚಿವ ಪ್ರಿಯಾಂಕ್​ ಖರ್ಗೆ ಮುಖ್ಯ ಸೂತ್ರಧಾರಿಯಂತೆ ಕಾರ್ಯನಿರ್ವಹಿಸಿದ್ದರು. ಇದರಿಂದ ಕೋಪಗೊಂಡಿರುವ ಆರ್​ಎಸ್​ಎಸ್ ಇದೀಗ ಸಚಿವ ಪ್ರಿಯಾಂಕ್​ ಖರ್ಗೆ ತವರಾದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿಯೇ ತನ್ನ ಶಕ್ತಿ ಪ್ರದರ್ಶಿಸುವ ಮೂಲಕ ತಿರುಗೇಟು ನೀಡಿದೆ.

ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಕಲಬುರಗಿ ಜಿಲ್ಲಾಡಳಿತ ಮೊದಲು ಅನುಮತಿ ನೀಡಿರಲಿಲ್ಲ. ಆದರೆ ಇದಕ್ಕೆ ಸುಮ್ಮತರಾಗದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್​ನಿಂದ ಅನುಮತಿ ಪಡೆದ ಆರ್​ಎಸ್​ಎಸ್​​ ಎಲ್ಲಾ ವಿರೋಧಗಳ ನಡುವೆಯೂ ಚಿತ್ತಾಪುರದಲ್ಲಿ ಪಥಸಂಚಲನ ನಡೆಸುವಲ್ಲಿ ಯಶಸ್ವಿಯಾಗಿದೆ.

300 ಜನ ಗಣವೇಶಧಾರಿಗಳು ಮತ್ತು 50 ಜನ ಬ್ಯಾಂಡ್ ವಾದಕರು ಸೇರಿದಂತೆ 350 ಜನ ಆರ್‌ಎಸ್‌ಎಸ್ ಕಾರ್ಯಕರ್ತರು ಭಾಗಿಯಾಗಲು ಅವಕಾಶ ನೀಡಲಾಗಿತ್ತು. ಚಿತ್ತಾಪುರ ಪಟ್ಟಣದಲ್ಲಿರುವ ಬಜಾಜ್​ ಕಲ್ಯಾಣ ಮಂಟಪದಲ್ಲಿ ಆರಂಭಗೊಂಡ ಫಥಸಂಚಲನವು ಸುಮಾರು 1.5 ಕಿಲೋಮೀಟರ್​ವರೆಗೂ ಸಾಗಿದ್ದು ಅಭೂತಪೂರ್ವ ಜನಬೆಂಬಲ ಗಳಿಸಿತು.

ರಾಜಕೀಯ ಸಂಘರ್ಷಕ್ಕೆ ಕಾರಣವಾಗಿರುವ ಪಥಸಂಚಲನದಲ್ಲಿ ಯಾವುದೇ ತೊಂದರೆಗಳು ಎದುರಾಗದಂತೆ ಟೈಟ್​ ಪೊಲೀಸ್​ ಸೆಕ್ಯೂರಿಟಿ ಒದಗಿಸಲಾಗಿತ್ತು. ಎಲ್ಲಾ ಭದ್ರತೆಗಳ ನಡುವೆ ಅತ್ಯಂತ ಶಾಂತಿಯುತವಾಗಿ ಆರ್​ಎಸ್​ಎಸ್​ ಚಿತ್ತಾಪುರದಲ್ಲಿ ತನ್ನ ಪಥಸಂಚಲನ ನಡೆಸಿದೆ. ಈ ವಿಚಾರವಾಗಿ ಮಾತನಾಡಿದ ಆರ್​ಎಸ್​ಎಸ್​ ಜಿಲ್ಲಾ ಪ್ರಮುಖ, ಅಶೋಕ್​ ಪಾಟೀಲ್​ ಶಾಂತಿಯುತ ಪಥಸಂಚಲನ ನಡೆದ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ರಾಜ್ಯದಲ್ಲಿಲ್ಲ ಸಿಎಂ ಸ್ಥಾನ ಬದಲಾವಣೆ – ಅಹಿಂದ ಅಸ್ತ್ರಕ್ಕೆ ಶರಣಾಯ್ತು ಕಾಂಗ್ರೆಸ್‌ ಹೈಕಮಾಂಡ್

ಇನ್ನು ರಾಜ್ಯದಲ್ಲಿ ಸರ್ಕಾರಿ ಕಟ್ಟಡಗಳಲ್ಲಿ ಆರ್​ಎಸ್​ಎಸ್​ ಕಾರ್ಯಚಟುವಟಿಕೆ ನಡೆಸುವುದನ್ನು ತಪ್ಪಿಸುವಂತೆ ಸಚಿವ ಪ್ರಿಯಾಂಕ್​ ಖರ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದಾದ ಬಳಿಕ ಜಾಣ ನಡೆ ಅನುಸರಿಸಿದ ರಾಜ್ಯ ಸರ್ಕಾರ ಆರ್​ಎಸ್​ಎಸ್​ ಹೆಸರು ಪ್ರಸ್ತಾಪಿಸದೇ ಈ ನಿಯಮ ಜಾರಿಗೆ ತಂದಿತ್ತು.

Exit mobile version