ಕಾಂಗ್ರೆಸ್​ ಸರ್ಕಾರಕ್ಕೆ ರಾಜ್ಯಪಾಲರ ಸೆಡ್ಡು : ಜಂಟಿ ಅಧಿವೇಶನದಲ್ಲಿ ಭಾಷಣಕ್ಕೆ ನಕಾರ

ಮ -ನರೇಗಾ ರದ್ದತಿ ವಿರೋಧಿಸಿ ಸಮರ ಸಾರಿರುವ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಸೆಡ್ಡು ಹೊಡೆದಿದ್ದಾರೆ. ಜಿ ರಾಮ್​ ಜಿ ವಿರುದ್ಧ ನಿರ್ಣಯ ಕೈಗೊಳ್ಳಲು ರಾಜ್ಯ ಸರ್ಕಾರ ಕರೆದಿರುವ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಥಾವರ್​ಚಂದ್​ ಗೆಹ್ಲೋಟ್​ ನಿರಾಕರಿಸಿದ್ದಾರೆ. ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಭಾಷಣದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸುವ ವಿಚಾರಗಳಿವೆ. ಹೀಗಾಗಿ ಭಾಷಣದಿಂದ 11 ಅಂಶಗಳನ್ನು ಕೈ ಬಿಡುವಂತೆ ಪಟ್ಟು ಹಿಡಿದಿದ್ದಾರೆ.
ಜಿ ರಾಮ್​ ಜಿ ಕಾಯ್ದೆಗೆ ರಾಷ್ಟ್ರಪತಿಗಳೇ ಅಂಕಿತ ನೀಡಿದ್ದಾರೆ. ಹೀಗಿರುವ ಅವರ ಅಧೀನದಲ್ಲಿ ಬರುವ ನಾನು ಆ ಕಾಯ್ದೆ ವಿರುದ್ಧ ಅಧಿವೇಶನದಲ್ಲಿ ಹೇಗೆ ಮಾತನಾಡುವುದು ಎಂಬುದು ರಾಜ್ಯಪಾಲರ ವಾದವಾಗಿದೆ. ಇತ್ತ ರಾಜ್ಯ ಸರ್ಕಾರ ಜಿ ರಾಮ್​ ಜಿಯಿಂದ ಬಡವರ ಉದ್ಯೋಗ ಅಪಾಯದಲ್ಲಿದೆ. ಸಂಪುಟ ಸಿದ್ಧಪಡಿಸಿರುವ ಭಾಷಣವನ್ನು ರಾಜ್ಯಪಾಲರು ಓದಲೇಬೇಕು. ಬೇಕಿದ್ದರೆ ಭಾಷೆ ಬದಲಿಸಿಕೊಡುತ್ತೇವೆ ಎಂದು ಪಟ್ಟು ಹಿಡಿದಿದೆ. ಹೀಗಾಗಿ ಇಂದಿನಿಂದ ಆರಂಭಗೊಳ್ಳಲಿರುವ ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲರು ಭಾಗವಹಿಸುತ್ತಾರೋ ಇಲ್ಲವೋ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.
ಈ ವಿಚಾರವಾಗಿ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ನಡುವೆ ಹಲವು ಸುತ್ತುಗಳ ಮಾತುಕತೆ ನಡೆದಿದೆ. ಅಂತಿಮವಾಗಿ ಜಿ ರಾಮ್​ ಜಿ ಕಾಯ್ದೆಯು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ ಹಾಗೂ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುತ್ತದೆ ಎಂಬ ಅಂಶಗಳನ್ನು ಕೈ ಬಿಡಲು ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಬೈಂದೂರು : ಪಕ್ಷ ವಿರೋಧಿ ಚಟುವಟಿಕೆ ಆರೋಪ: ಬಿಜೆಪಿ ನಿಕಟ ಪೂರ್ವ ಮಂಡಲಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ 6 ವರ್ಷ ಉಚ್ಛಾಟನೆ

ತಡರಾತ್ರಿಯವರೆಗೂ ರಾಜ್ಯಪಾಲರಿಂದ ಅಧಿವೇಶನಕ್ಕೆ ಭಾಗಿಯಾಗುವ ಕುರಿತು ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಒಂದು ವೇಳೆ ಇಂದು ರಾಜ್ಯಪಾಲರು ಅಧಿವೇಶನಕ್ಕೆ ಹಾಜರಾಗದೇ ಹೋದಲ್ಲಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.ರಾಜ್ಯಪಾಲರು ತಮ್ಮ ಹುದ್ದೆ ನಿರ್ವಹಿಸಬೇಕು. ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣ ಓದಲೇಬೇಕು ಎಂದು ಸುಪ್ರೀಂಕೋರ್ಟ್​ನಲ್ಲಿ ರಾಜ್ಯ ಸರ್ಕಾರ ವಾದಮಂಡಿಸಲಿದೆ.

Exit mobile version