‘ಕೇಂದ್ರದ ನಾಯಕರ ಓಲೈಕೆಗೆ ಬಿಜೆಪಿಗರಿಂದ ದ್ವಿಭಾಷಾ ನೀತಿಗೆ ವಿರೋಧ’ : ಡಿ.ಕೆ ಸುರೇಶ್​

ರಾಜ್ಯದಲ್ಲಿ ದ್ವಿಭಾಷಾ ನೀತಿ (Bilingual Policy) ಜಾರಿಗೆ ಬಿಜೆಪಿ ವಿರೋಧ ವಿಚಾರವಾಗಿ ಮಾಜಿ ಸಂಸದ ಡಿ.ಕೆ ಸುರೇಶ್​ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ದೇಶದಲ್ಲಿ ಮಾತೃಭಾಷೆ ಬಹಳ ಮುಖ್ಯ. ದ್ವಿ ಭಾಷಾ ನೀತಿಗೆ ನಮ್ಮ ಒತ್ತಾಯವಿದೆ. ತೃತೀಯ ಭಾಷೆ ಬೇಕಾ, ಬೇಡ್ವಾ ಎನ್ನುವುದು ಪೋಷಕರಿಗೆ ಬಿಟ್ಟ ವಿಚಾರ. ಮಕ್ಕಳ ಮೇಲೆ ಮೂರು ಭಾಷೆಯ ಒತ್ತಡ ಹಾಕುವುದು ಸರಿಯಲ್ಲ. ಇದರಿಂದ ಅವರಕಲಿಕೆ ಮೇಲೆ ಪರಿಣಾಮ ಬೀರುತ್ತದೆ. ಈ ರಾಜ್ಯ ಬಿಜೆಪಿಗರು ಕೇಂದ್ರದ ನಾಯಕರನ್ನು ಮೆಚ್ಚಿಸುವ ಉದ್ದೇಶದಿಂದ ಎಲ್ಲವನ್ನೂ ವಿರೋಧ ಮಾಡುತ್ತಲೇ ಬರುತ್ತಿದ್ದಾರೆ. ನಾವು ಹಿಂದಿ ಪರ ಹೋರಾಟ ಮಾಡುತ್ತಿದ್ದೇವೆ ಎಂಬುದನ್ನು ಕೇಂದ್ರದ ನಾಯಕರಿಗೆ ತೋರಿಸಬೇಕು. ಇದನ್ನೇ ರಾಜ್ಯ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ಮೂರನೇ ಭಾಷೆಯಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ. ಹೀಗಾಗಿ ಎರಡು ಭಾಷೆಗಳಿಗೆ ಅವಕಾಶ ನೀಡಿದ್ದೇವೆ. ರಾಜ್ಯ ಸರ್ಕಾರದ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿದ್ದಾರೆ.

ದಾವಣಗೆರೆ ವಿಧಾನಸಭಾ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್​ ನೀಡದ್ದಕ್ಕೆ ಸಚಿವ ಜಮೀರ್​ ಅಹಮದ್​ ಮುನಿಸು ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಅವರು ನಗ್ತಾನೇ ಇದ್ದಾರಲ್ಲ; ಕೇರಳದಲ್ಲಿ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಜನರು ಕಾಂಗ್ರೆಸ್​ ಅಭ್ಯರ್ಥಿಗೆ ಮತ ಹಾಕುತ್ತಾರೆ. ಕಾಂಗ್ರೆಸ್​ ಅಭ್ಯರ್ಥಿಯೇ ಚುನಾವಣೆಯಲ್ಲಿ ಖಂಡಿತ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಎಂಎಫ್​ ಅಧ್ಯಕ್ಷ ಚುನಾವಣೆ ವಿಳಂಬ ವಿಚಾರವಾಗಿ ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಯಾಕೆ ವಿಳಂಬ ಆಗ್ತಿದೆ ಎನ್ನುವುದು ನನಗೆ ತಿಳಿದಿಲ್ಲ. ಆದರೆ ನಾನು ಎಲ್ಲಿಯೂ ನಾನು ಕೆಎಂಎಫ್​ ಚುನಾವಣೆಯ ಅಧ್ಯಕ್ಷ ಹುದ್ದೆ ಆಕಾಂಕ್ಷಿ ಎಂದು ಹೇಳಿಲ್ಲ. ಯಾರೂ ಕೂಡ ಡಿ.ಕೆ ಸುರೇಶ್​ ಕೆಎಂಎಫ್​ ಅಧ್ಯಕ್ಷರಾಗಬೇಕು ಎಂದಿಲ್ಲ. ಈ ರೀತಿಯ ಕೂಗು ನನ್ನ ಕಿವಿಗಂತೂ ಕೇಳಿಬಂದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ ಯಾವಾಗ? ದಿನಾಂಕ, ವೆಬ್‌ಸೈಟ್‌ ಮಾಹಿತಿ ಇಲ್ಲಿದೆ ನೋಡಿ

ಶಾಸಕರು ಉಚಿತವಾಗಿ ಐಪಿಎಲ್​ ಟಿಕೆಟ್​ ಕೇಳಿದ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ಆ ರೀತಿ ಟಿಕೆಟ್​ ಕೇಳಿರುವುದು ತಪ್ಪೇ. ಈಗ ಯಾರು ಮಾತನಾಡಿದರೂ ಸರಿಯಲ್ಲ. ಹಿಂದೆ ಕಾಲ್ತುಳಿತ ಪ್ರಕರಣ ಆದಾಗ ಯಾರ್ಯಾರು ಏನೇನು ಮಾತಾಡಿದ್ರು ? ಟಿಕೆಟ್​ ಇಚ್ಛೆ ಇದ್ದವರು ತೆಗೆದುಕೊಳ್ಳಲಿ. ಆಸಕ್ತಿ ಇರುವವರು ಕಾಸು ಕೊಟ್ಟು ಕ್ರಿಕೆಟ್​ ನೋಡಲಿ . ಈ ರೀತಿ ಉಚಿತ ಟಿಕೆಟ್​ ಕೇಳುವುದು ಒಳ್ಳೆಯ ಬೆಳವಣಿಗೆ ಅಲ್ಲ. ಅದೇನು ರಾಷ್ಟ್ರೀಯ ಕ್ರೀಡೆಯಲ್ಲ. ಕಮರ್ಷಿಯಲ್​ ಗೇಮ್​ ಅಷ್ಟೇ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Exit mobile version