ರಾಜ್ಯದಲ್ಲಿಲ್ಲ ಸಿಎಂ ಸ್ಥಾನ ಬದಲಾವಣೆ – ಅಹಿಂದ ಅಸ್ತ್ರಕ್ಕೆ ಶರಣಾಯ್ತು ಕಾಂಗ್ರೆಸ್ ಹೈಕಮಾಂಡ್​

ಬಿಹಾರದಲ್ಲಿ ಮಹಾಘಟಬಂಧನ್​ ಸೋಲಿನ ಬಳಿಕ ಕಾಂಗ್ರೆಸ್​ ಪರಾಮರ್ಶೆಗೆ ಇಳಿದಿದೆ. ಮೇಲ್ನೋಟಕ್ಕೆ ಬಿಜೆಪಿ ಹಾಗೂ ಚುನಾವಣಾ ಆಯೋಗದ ತಂತ್ರಗಾರಿಕೆಯಿಂದ ತಮಗೆ ಸೋಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದರೂ ಅಸಲಿ ವಿಚಾರ ಏನೆಂಬುದು ಕಾಂಗ್ರೆಸ್​ಗೂ ತಿಳಿದಿದೆ. ಬಿಹಾರ ರಾಜಕಾರಣದಲ್ಲಿ ಜಾತಿ ಸಮೀಕರಣ ಬಳಕೆ ಮಾಡುವುದರಲ್ಲಿ ಸಂಪೂರ್ಣ ಎಡವಿದ ಕಾಂಗ್ರೆಸ್​ನ ನಡೆ ಹಿಂದುಳಿದ ವರ್ಗದ ಅಸಮಾಧಾನಕ್ಕೆ ಕಾರಣವಾಗಿತ್ತು. ಕಾಂಗ್ರೆಸ್​ನ ಹೀನಾಯ ಸೋಲಿಗೆ ಹಿಂದುಳಿದ ವರ್ಗಗಳ ಮತಬ್ಯಾಂಕ್​ ಪರಿಣಾಮ ಬೀರಿದೆ. ಇದೇ ತಪ್ಪು ಕರ್ನಾಟಕದಲ್ಲಿಯೂ ಮಾಡುವುದು ಬೇಡ ಎಂದು ನಿರ್ಧರಿಸಿರುವ ಕಾಂಗ್ರೆಸ್​ ವರಿಷ್ಠರು ರಾಜ್ಯದಲ್ಲಿ ಸಿದ್ದರಾಮಯ್ಯ ಅವರನ್ನೇ ಸಿಎಂ ಸ್ಥಾನದಲ್ಲಿ ಮುಂದುವರಿಸುವ ಅಚಲ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ದೇಶದಲ್ಲಿ ಕಾಂಗ್ರೆಸ್​ ಆಡಳಿತ ಎನ್ನುವುದು ಮರೀಚಿಕೆ ಎಂಬಂತೆ ಆಗುತ್ತಿದೆ. ಹೀಗಿರುವಾಗ ಕರ್ನಾಟಕದಲ್ಲಿ ಹೊಸ ಪ್ರಯೋಗ ಮಾಡಿ ಇಲ್ಲಿನ ಅಧಿಕಾರವನ್ನೂ ಕಳೆದುಕೊಳ್ಳುವ ಧೈರ್ಯ ಕಾಂಗ್ರೆಸ್​ಗೆ ಇಲ್ಲ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದರೆ ಹಿಂದುಳಿದ ವರ್ಗಗಳ ಮತ ಕೈ ಚೆಲ್ಲಿ ಹೋಗುವ ಸಾಧ್ಯತೆ ಇದೆ. ಇದೆಲ್ಲ ರಾಜಕೀಯ ಲೆಕ್ಕಾಚಾರ ಮಾಡಿರುವ ಕೈ ಹೈಕಮಾಂಡ್​ ಸಿದ್ದರಾಮಯ್ಯರಿಗೆ ನೀವು ಸೇಫ್​ ಎಂಬ ಸಂದೇಶವನ್ನು ಈಗಾಗಲೇ ರವಾನೆ ಮಾಡಿದೆ ಎನ್ನಲಾಗಿದೆ.

ಇದನ್ನೂ ಓದಿ: ಬಿಹಾರದಲ್ಲಿ ಕಾಂಗ್ರೆಸ್‌ಗೆ ಸೋಲಿನ ಕಹಿ ; ರಾಜ್ಯದಲ್ಲಿ ‘ನವೆಂಬ‌ರ್ ಕ್ರಾಂತಿ’ಗೆ ತಿಲಾಂಜಲಿ

ಉತ್ತರ ಭಾರತದಲ್ಲಿ ಕಾಂಗ್ರೆಸ್​ ಹಿಂದುಳಿದ ವರ್ಗಗಳ ನಾಯಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಅಪವಾದ ಇದೆ. ಹೀಗಿರುವಾಗ ದಕ್ಷಿಣ ಭಾರತದಲ್ಲಿಯೂ ಇಂತಹ ತಪ್ಪನ್ನು ಪುನರಾವರ್ತಿಸುವ ಧೈರ್ಯ ಮಾಡದ ಕಾಂಗ್ರೆಸ್​ ಹೈಕಮಾಂಡ್​ ಸದ್ಯ ಯಾವುದೇ ಹೊಸ ಪ್ರಯೋಗ ಬೇಡ ಎಂದು ರಾಜ್ಯ ಕಾಂಗ್ರೆಸ್​ ನಾಯಕರಿಗೆ ಕಡಾಖಂಡಿತವಾಗಿ ಹೇಳಿದೆ ಎನ್ನಲಾಗಿದೆ. ಇದರಿಂದಾಗಿ ರಾಜ್ಯದ ಸಿಎಂ ಆಗುವ ಕನಸು ಕಾಣುತ್ತಿರುವ ಡಿ.ಕೆ ಶಿವಕುಮಾರ್​ಗೂ ಈ ಬಾರಿಯೂ ನಿರಾಶೆ ಕಟ್ಟಿಟ್ಟ ಬುತ್ತಿ..!

Exit mobile version