ಸಂಘಟನಾ ಚತುರ ನಿತಿನ್​ ನಬಿನ್​ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನ : ಯಾರಿವರು? ಏನಿವರ ಹಿನ್ನೆಲೆ? ಇಲ್ಲಿದೆ ಮಾಹಿತಿ

ಜೆ.ಪಿ ನಡ್ಡಾ ಅವರ ಅಧಿಕಾರಾವಧಿ ಪೂರ್ಣಗೊಂಡ ಬಳಿಕ ತೆರವಾಗಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಹೊಸ ನಾಯಕನ ಆಯ್ಕೆ ಪೂರ್ಣಗೊಂಡಿದೆ. ಬಿಜೆಪಿ ಹಿರಿಯ ನಾಯಕ, ಬಿಹಾರದ ಶಾಸಕ ನಿತಿನ್​ ನಬಿನ್​ ಅವಿರೋಧವಾಗಿ ಈ ಸ್ಥಾನಕ್ಕೆ ಆಯ್ಕೆಗೊಂಡಿದ್ದು ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷನಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷನ ಸ್ಥಾನಕ್ಕೆ ನಿತಿನ್​ ನಬಿನ್​ರನ್ನು ಆಯ್ಕೆಮಾಡುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಅಚ್ಚರಿಯ ಬೆಳವಣಿಗೆ ಎಂಬಂತೆ ಸಂಘಟನಾ ಚತುರ ನಿತಿನ್​ ನಬಿನ್​ ಈ ಸ್ಥಾನ ಅಲಂಕರಿಸುತ್ತಿದ್ದಾರೆ. 20 ವರ್ಷಗಳ ರಾಜಕೀಯ ಜೀವನದ ಅನುಭವ ಹೊಂದಿರುವ ನಿತಿನ್​ ನಬಿನ್​ ವಿದ್ಯಾರ್ಥಿ ಜೀವನದಿಂದಲೇ ಎಬಿವಿಪಿ ಪ್ರವೇಶಿಸುವ ಮೂಲಕ ಬಿಜೆಪಿ ಸಂಪರ್ಕಕ್ಕೆ ಬಂದವರು. 2000ನೇ ಇಸ್ವಿಯಿಂದ ರಾಜಕೀಯದಲ್ಲಿ ಸಕ್ರಿಯವಾಗಿರುವ ನಿತಿನ್​ ನಬಿನ್​​ 26ನೇ ವಯಸ್ಸಿಗೆ ಶಾಸಕ ಸ್ಥಾನ ಅಲಂಕರಿಸಿದವರು.
ಮಾಜಿ ಶಾಸಕ ದಿವಂಗತ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಪುತ್ರ ನತಿನ್​ ನಬಿನ್ ಬಂಕಿಪುರ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದಾರೆ. ಲೋಕೋಪಯೋಗಿ ಸಚಿವ ಸ್ಥಾನವನ್ನೂ ನಿತಿನ್​ ನಿಭಾಯಿಸಿದ್ದಾರೆ.

ಇದನ್ನೂ ಓದಿ: ಸಮವಸ್ತ್ರದಲ್ಲಿ ರಾಸಲೀಲೆ; ಡಿಜಿಪಿ ರಾಮಚಂದ್ರ ರಾವ್ ಅಮಾನತು

ಆರ್​ಎಸ್​ಎಸ್​ ಹಿನ್ನೆಲೆ ಹೊಂದಿರುವ ನಿತಿನ್​ ನಬಿನ್​ ಪಕ್ಷ ಸಂಘಟನೆಯಲ್ಲಿ ಚಾಣಕ್ಯ ಎಂದು ಹೇಳಿದರೆ ತಪ್ಪಾಗಲಾರದು. ಬಿಹಾರ ಕಾರ್ಯಕಾರಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ನಿತಿನ್​ ಬಳಿಕ ಪಕ್ಷದ ರಾಷ್ಟ್ರೀಯ ಜವಾಬ್ದಾರಿ ಹೊತ್ತಿದ್ದರು. ಚತ್ತೀಸಘಡ ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಕೂಡ ನಿತಿನ್​ ಸೇವೆ ಸಲ್ಲಿಸಿದ್ದಾರೆ. ಪಕ್ಷ ಬಲವರ್ಧನೆ ಹಾಗೂ ಸಂಘಟನೆಗೆ ಹೆಸರುವಾಸಿಯಾಗಿರುವ ನಿತಿನ್​ ನಬಿನ್​​ ಬಿಜೆಪಿ ಪಕ್ಷವನ್ನು ರಾಷ್ಟ್ರಮಟ್ಟದಲ್ಲಿ ಯಾವ ರೀತಿ ಮುನ್ನಡೆಸುತ್ತಾರೆ ಅನ್ನೋದನ್ನ ಕಾದು ನೋಡ್ಬೇಕಿದೆ.

Exit mobile version