ವಿಚ್ಛೇದಿತ ಪುತ್ರಿಯೊಬ್ಬರು ತಮ್ಮ ತಂದೆಯ ಪಿಂಚಣಿ ಪಡೆಯಲು ಹೈಕೋರ್ಟ್ ಮೊರೆ ಹೋಗಿದ್ದು, ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ತ್ರಿಪುರ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ತಂದೆಯ ಮರಣದ ಬಳಿಕ ವಿಚ್ಛೇದನ ಪಡೆದ ಪುತ್ರಿಯು ಕುಟುಂಬ ಪಿಂಚಣಿಗೆ ಅರ್ಹಳಲ್ಲ ಎಂದು ತೀರ್ಪು ನೀಡಿದೆ.
ಪಿಂಚಣಿದಾರನ ಮರಣದ ಬಳಿಕ ಆತನ ಕುಟುಂಬದಲ್ಲಿ ಆದ ಬದಲಾವಣೆಗಳನ್ನು ಪರಿಗಣಿಸಲು ಸಾಧ್ಯವಿಲ್ಲ. ತಂದೆಯ ಮರಣದ ಮೊದಲೇ ಮಗಳಿಗೆ ವಿಚ್ಛೇದನವಾಗಿದ್ದರೆ ಮಾತ್ರ ಆಕೆಯ ಕುಟುಂಬ ಪಿಂಚಣಿಗೆ ಅರ್ಹಳು. ತಂದೆಯ ಮರಣಾನಂತರದ ಘಟನೆಗಳಿಗೂ ಕುಟುಂಬ ಪಿಂಚಣಿಗೂ ಸಂಬಂಧ ಕಲ್ಪಿಸಲು ಸಾಧ್ಯವಾಗದು ಎಂದು ಹೇಳಿದೆ.
ಇದನ್ನೂ ಓದಿ: ನ್ಯಾಯಾಂಗ ಹೋರಾಟದಲ್ಲಿ ದರ್ಶನ್ ಪತ್ನಿಗೆ ಗೆಲುವು: ರೇಣುಕಾಸ್ವಾಮಿ ಕೊಲೆಯಾಧಾರಿತ ಬಾಸ್ ಸಿನಿಮಾಗೆ ಕೋರ್ಟ್ ತಡೆ
ಅರ್ಜಿದಾರ ಮಹಿಳೆಯ ತಂದೆ ಅಗರ್ತಲಾ ಮುನ್ಸಿಪಲ್ ಕಾರ್ಪೋರೇಷನ್ನಲ್ಲಿ ಕೆಲಸ ಮಾಡುತ್ತಿದ್ದರು. 2018ರಲ್ಲಿ ಅವರು ನಿಧನರಾಗಿದ್ದರು. ಇತ್ತ ಅರ್ಜಿದಾರ ಮಹಿಳೆಯು 2021ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಹಾಗೂ ತಂದೆಯ ಮರಣಾನಂತರ ದೊರೆಯುವ ಕುಟುಂಬ ಪಿಂಚಣಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ದತ್ತಾ ಪುರ್ಕಾಯಸ್ಥ, ತ್ರಿಪುರ ರಾಜ್ಯ ನಾಗರಿಕ ಸೇವೆಗಳ (ಪರಿಷ್ಕೃತ ಪಿಂಚಣಿ) ನಿಯಮಗಳು, 2017ರ ನಿಯಮದ ಅಡಿಯಲ್ಲಿ , ಪಿಂಚಣಿದಾರನ ಮರಣ ಸಂದರ್ಭದಲ್ಲಿಯೇ ಪುತ್ರಿಯು ವಿಚ್ಛೇದಿತಳಾಗಿರಬೇಕು. ಪಿಂಚಣಿದಾರನು ಸಾವನ್ನಪ್ಪಿದ ದಿನದವರೆಗಿನ ಸ್ಥಿತಿಯನ್ನು ಮಾತ್ರ ಪರಿಗಣಿಸಲಾಗುತ್ತದೆ. ಇದಾದ ಬಳಿಕ ಆಗುವ ಯಾವುದೆ ಬದಲಾವಣೆಗಳನ್ನು ಅರ್ಹತಾ ಮಾನದಂಡವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
