ಬೆಳ್ತಂಗಡಿ: ಶಾಲಾ ಮಕ್ಕಳ ಅಧ್ಯಯನ ಪ್ರವಾಸದ ವಿಚಾರದಲ್ಲಿ ಮುಖ್ಯೋಪಾಧ್ಯಾಯರು ಭಾರೀ ನಿರ್ಲಕ್ಷ್ಯ ತೋರಿದ ಘಟನೆಯು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದಲ್ಲಿ ನಡೆದಿದೆ. ಜೇನು ಕೃಷಿ ಅಧ್ಯಯನ ವೀಕ್ಷಣೆಗೆ ತೆರೆದ ಪಿಕಪ್ ಹಾಗೂ ಟಿಪ್ಪರ್ ಗಾಡಿಗಳಲ್ಲಿ ವಿದ್ಯಾರ್ಥಿಗಳನ್ನು ದನ ತುಂಬಿದಂತೆ ತುಂಬಿಕೊಂಡು ಹೋಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಬಂಧ ವಿಡಿಯೋ ವೈರಲ್ ಆಗಿದೆ.
ಬಳೆಂಜದ ಹಿರಿಯ ಪ್ರಾಥಮಿಕ ಶಾಲೆಯ ಪ್ರಬಾರ ಮುಖ್ಯೋಪಾಧ್ಯಾಯ ಕಿರಣ್ ಎಂಬವರು ಈ ರೀತಿಯ ಅವಾಂತರ ಮಾಡಿದ್ದಾರೆ. ಜೇನು ಕೃಷಿ ಅಧ್ಯಯನಕ್ಕೆಂದು ನಾಲ್ಕೂರು ಬಳಿ ಇರುವ ಅನಿಲ್ ಫಾರ್ಮ್ಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ಮುಖ್ಯೋಪಾಧ್ಯಾಯ ಕಿರಣ್ ಪ್ಲಾನ್ ರೂಪಿಸಿದ್ದರು.
ಇದನ್ನೂ ಓದಿ: 2011ಕ್ಕೂ ಮೊದಲು ನೇಮಕಗೊಂಡ ಶಿಕ್ಷಕರಿಗೆ ಹೊಸ ನಿಯಮ : ಬಡ್ತಿ ಬೇಕೆಂದರೆ ಈ ಅರ್ಹತೆ ಇರುವುದು ಕಡ್ಡಾಯ
ಆದರೆ ವಿದ್ಯಾರ್ಥಿಗಳಿಗೆ ಸೂಕ್ತ ವಾಹನ ವ್ಯವಸ್ಥೆ ಮಾಡುವುದನ್ನು ಬಿಟ್ಟು ವಿದ್ಯಾರ್ಥಿಗಳನ್ನು ಫಾರ್ಮ್ಗೆ ಕರೆದುಕೊಂಡು ಹೋಗಲು ಪಿಕಪ್ ಹಾಗೂ ಟಿಪ್ಪರ್ ಗಾಡಿಗಳನ್ನು ಆಯ್ಕೆಮಾಡಿಕೊಂಡಿದ್ದಾರೆ. ಸ್ಥಳೀಯರು ಇದರ ವಿಡಿಯೋ ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯರ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದು ಎರಡೂ ವಾಹನಗಳ ಚಾಲಕರ ಮೇಲೂ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
