“ಮೇ ತಿಂಗಳಲ್ಲಿ ಬರಲಿದ್ದಾನೆ ವರುಣ: ದಕ್ಷಿಣ ಒಳನಾಡಿನ ಜನರೇ ಎಚ್ಚರ!”

ಏಪ್ರಿಲ್​ 30 ಹಾಗೂ ಮೇ 1ರಂದು ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ.

ಬಿಸಿಲ ತಾಪಕ್ಕೆ ರಾಜ್ಯದ ಜನತೆ ಕಂಗೆಟ್ಟು ಹೋಗಿದ್ದಾರೆ. ಆದರೆ ಈ ನಡುವೆಯೇ ಮೇ ತಿಂಗಳನ್ನು ಮಳೆಯೊಂದಿಗೆ ಸ್ವಾಗತಿಸುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ರಾಜ್ಯದ ಜನತೆ ಖುಷ್​ ಆಗಿದ್ದಾರೆ. ಮುಂದಿನ 3 ದಿನಗಳ ಕಾಲ ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ದಕ್ಷಿಣ ಒಳನಾಡಿನಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಏಪ್ರಿಲ್​ 30 ಹಾಗೂ ಮೇ 1ರಂದು ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ. ಇಂದು ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಏಪ್ರಿಲ್​ 30ರಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಮತ್ತು ರಾಮನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ : ಸಿನಿಮಾ ಪ್ರೇಮಿಗಳಿಗೆ ಗುಡ್ ನ್ಯೂಸ್: ‘3 ಇಡಿಯಟ್ಸ್’ 2 ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ ಆಮೀರ್ ಖಾನ್!

ಇನ್ನು ಈ ಅವಧಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಉಡುಪಿಯಲ್ಲಿ ಗರಿಷ್ಠ ತಾಪಮಾನ 32ರಿಂದ 36 ಡಿಗ್ರಿ ಸೆಲ್ಸಿಯಸ್​ ಇರಲಿದೆ. ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 33ರಿಂದ 35 ಡಿಗ್ರಿ ಸೆಲ್ಸಿಯಸ್​ ಆಸುಪಾಸಿನಲ್ಲಿ ಇರಲಿದೆ. ರಾತ್ರಿ ವೇಳೆಗೆ ತಾಪಮಾನ 26 ಡಿಗ್ರಿ ಸೆಲ್ಸಿಯಸ್​ಗೆ ಬರಲಿದೆ. ಮಳೆಯ ಮುನ್ಸೂಚನೆ ಇದ್ದರೂ ಸಹ, ಕರಾವಳಿ ಭಾಗದಲ್ಲಿ ಹವಾಮಾನವು ಆರ್ದ್ರತೆಯಿಂದ ಕೂಡಿದ್ದು, ಅತ್ಯಧಿಕ ಸೆಖೆಯ ಅನುಭವ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Exit mobile version