ಸಂಚಾರಿ ನಿಯಮ ಉಲ್ಲಂಘನೆ ತಡೆಗೆ ಹೊಸ ಅಸ್ತ್ರ : ಇನ್ಮುಂದೆ ದಂಡದ ಜೊತೆ ಎಫ್ಐಆರ್​

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸಂಚಾರ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ಖಾಕಿ ಮುಂದಾಗಿದೆ. ದಂಡ ಕಟ್ಟಿದ್ರೆ ಆಯ್ತು ಎಂಬ ನಿರ್ಲಕ್ಷ್ಯದೊಂದಿಗೆ ಅನಾಯಾಸವಾಗಿ ಟ್ರಾಫಿಕ್​ ನಿಯಮ ಉಲ್ಲಂಘನೆ ಮಾಡುತ್ತಿರುವ ವಾಹನ ಸವಾರರ ಮೇಲೆ ಇನ್ಮುಂದೆ ಹೊಸ ಅಸ್ತ್ರ ಪ್ರಯೋಗಕ್ಕೆ ಸಂಚಾರಿ ಠಾಣಾ ಪೊಲೀಸರು ಮುಂದಾಗಿದ್ದಾರೆ.
ಸಿಗ್ನಲ್​ ಜಂಪ್​, ತಪ್ಪಾದ ದಿಕ್ಕುಗಳಲ್ಲಿ ವಾಹನ ಚಾಲನೆ ಸೇರಿದಂತೆ ವಾಹನ ಸವಾರರ ಸಣ್ಣ ಸಣ್ಣ ತಪ್ಪುಗಳಿಗೂ ಇನ್ಮುಂದೆ ದಂಡದ ಜೊತೆಯಲ್ಲಿ ಎಫ್​ಐಆರ್​ ದಾಖಲಾಗಲಿದೆ. ಇದು ಮಾತ್ರವಲ್ಲದೇ ಪೊಲೀಸರು ಸ್ಥಳದಲ್ಲೇ ನಿಮ್ಮ ವಾಹನವನ್ನು ಜಪ್ತಿ ಮಾಡಲೂಬಹುದು. ಬೆಂಗಳೂರಿನ ಪಶ್ಚಿಮ ವಿಭಾಗ ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ ಈ ನಿಯಮ ಜಾರಿಗೆ ಬಂದಿದೆ.
ದಂಡ ಹಾಕುವ ಪ್ರಕ್ರಿಯೆಯು ವಾಹನ ಸವಾರರಲ್ಲಿ ಯಾವುದೇ ರೀತಿಯ ಭಯ ಹುಟ್ಟಿಸುತ್ತಿಲ್ಲ. ಹೀಗಾಗಿ ಮನಸ್ಸಿಗೆ ಬಂದಂತೆ ಟ್ರಾಫಿಕ್​ ನಿಯಮ ಮೀರುತ್ತಿರುವುದು ಅನೇಕ ಕಡೆಗಳಲ್ಲಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಬಿಸಿ ಮುಟ್ಟಿಸುವ ದಿಶೆಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದಿಂದ ಗ್ರಾಹಕರಿಗೆ ಶಾಕ್ : ಸೇವಾ ಶುಲ್ಕ ದರದಲ್ಲಿ ಮತ್ತೆ ಏರಿಕೆ

2025ರ ಜನವರಿ ತಿಂಗಳಿನಿಂದ ನವೆಂಬರ್​ ಅಂತ್ಯದವರೆಗೆ ಸುಮಾರು 6.62 ಲಕ್ಷ ಸಿಗ್ನಲ್​ ಜಂಪ್​ ಪ್ರಕರಣ ಹಾಗೂ 3.02 ಲಕ್ಷ ನಿರ್ಬಂಧಿತ ರಸ್ತೆಗಳಲ್ಲಿ ಸಂಚಾರ ಪ್ರಕರಣಗಳು ವರದಿಯಾಗಿದೆ. ಸಂಚಾರ ಉಲ್ಲಂಘನೆ ಪ್ರಕರಣಗಳು ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲೇ ವಾಹನ ಜಪ್ತಿ ಹಾಗೂ ಎಫ್​ಐಆರ್​ನಂತ ಕಠಿಣ ಕ್ರಮಗಳಿಗೆ ಮೊರೆ ಹೋಗುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version