ಸಾರ್ವಜನಿಕರ ಆಗ್ರಹಕ್ಕೆ ಕೊನೆಗೂ ಮಣಿದ ಸರ್ಕಾರ : ಸರ್ಕಾರಿ ಬಸ್​ಗಳಲ್ಲಿ ತಂಬಾಕು ಸಂಬಂಧಿ ಜಾಹೀರಾತು ನಿಷೇಧ

ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಸರ್ಕಾರವೇ ಜಾಹೀರಾತು ನೀಡುತ್ತದೆ. ಆದರೆ ಇತ್ತ ಸಾರಿಗೆ ಇಲಾಖೆಯ ಸರ್ಕಾರಿ ಬಸ್​ಗಳಲ್ಲಿ ತಂಬಾಕು ಸಂಬಂಧಿ ಜಾಹೀರಾತುಗಳು ಕಾಣಸಿಗುತ್ತಿದ್ದವು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪವ್ಯಕ್ತವಾದ ಬೆನ್ನಲ್ಲೇ ಸಾರಿಗೆ ಇಲಾಖೆ ಎಚ್ಚೆತ್ತಿದೆ. ರಾಜ್ಯದ ಎಲ್ಲಾ ಸಾರಿಗೆ ನಿಗಮಗಳ ಬಸ್​ಗಳಲ್ಲಿ ಯಾವುದೇ ಕಾರಣಕ್ಕೂ ತಂಬಾಕು ಸಂಬಂಧಿ ಜಾಹೀರಾತುಗಳನ್ನು ಅಂಟಿಸುವಂತಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಖಡಕ್​ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಸರ್ಕಾರಿ ಬಸ್​ಗಳಲ್ಲಿ ಇರುತ್ತಿದ್ದ ತಂಬಾಕು ಕಂಪನಿಗಳ ಜಾಹೀರಾತಿಗೆ ಬ್ರೇಕ್​ ಬಿದ್ದಿದೆ.

ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಕರೆ ನೀಡುವ ಸರ್ಕಾರ ಒಂದೆಡೆಯಾದರೆ ಸರ್ಕಾರದ ಅಧೀನದಲ್ಲೇ ಬರುವ ಸಾರಿಗೆ ಇಲಾಖೆಯ ಬಸ್​ಗಳಲ್ಲಿ ಪಾನ್​ ಮಸಾಲಾ ಕಂಪನಿಗಳ ಜಾಹೀರಾತುಗಳು ಸಾರ್ವಜನಿಕರಿಗೆ ಇರಿಸು ಮುರಿಸು ಉಂಟು ಮಾಡಿತ್ತು . ಈ ಬಗ್ಗೆ ಸಾರಿಗೆ ಇಲಾಖೆಗೆ ಸಾರ್ವಜನಿಕರಿಂದ ಅನೇಕ ಬಾರಿ ದೂರು ಕೂಡ ಕೇಳಿ ಬಂದಿತ್ತು. ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಈ ಮಹತ್ವದ ಕ್ರಮ ಹೊರಡಿಸಿದೆ.

ಇದನ್ನೂ ಓದಿ: ವಾಹನ ಸವಾರರಿಗೆ ಬಿಗ್​ ರಿಲೀಫ್​: ಫಾಸ್ಟ್​ಟ್ಯಾಗ್​ KYC ನವೀಕರಣ ನಿಯಮಾವಳಿಗಳಲ್ಲಿ ಬದಲಾವಣೆ

ಎಸ್‌ಆರ್‌ಟಿಸಿ ,ಬಿಎಂಟಿಸಿ , ಎನ್‌ಡಬ್ಲ್ಯೂಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ನಾಲ್ಕೂ ನಿಗಮಗಳ ಬಸ್ಸುಗಳಿಗೆ ಅನ್ವಯವಾಗಲಿದೆ. ಈ ವಿಚಾರವಾಗಿ ಮಾತನಾಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸರ್ಕಾರಕ್ಕೆ ಆದಾಯಕ್ಕಿಂತ ಸಾರ್ವಜನಿಕರ ಆರೋಗ್ಯ ಮುಖ್ಯ. ನಿಯಮ ಮೀರಿ ಯಾವುದಾದರೂ ಬಸ್​ಗಳಲ್ಲಿ ಈ ಮಾದರಿಯ ಜಾಹೀರಾತು ಕಂಡುಬಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದ್ದಾರೆ.

Exit mobile version