ಆಸ್ಸಾಂ, ಕೇರಳ ರಾಜ್ಯಕ್ಕೆ ಹಿರಿಯ ಚುನಾವಣೆ ವೀಕ್ಷಕರ ನೇಮಕ : ಡಿ.ಕೆ ಶಿವಕುಮಾರ್​, ಕೆ.ಜೆ ಜಾರ್ಜ್​ಗೆ ಸ್ಥಾನ

DK Shivakumar : ಬೆಂಗಳೂರು : ದೇಶದಲ್ಲಿ ಒಂದೊಂದಾಗಿಯೇ ರಾಜ್ಯಗಳ ಅಧಿಕಾರವನ್ನು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್​ ಪಕ್ಷವು ದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲು ನಿರ್ಧರಿಸಿದೆ.

ಸಂಪೂರ್ಣ ಭಾರತ ಕೇಸರಿಮಯವಾಗುವುದನ್ನು ತಪ್ಪಿಸಬೇಕು ಎಂಬ ಉದ್ದೇಶ ಹೊಂದಿರುವ ಕಾಂಗ್ರೆಸ್​ ಪಕ್ಷವು ಸದ್ಯ ಬರಲಿರುವ ಆಸ್ಸಾಂ, ಕೇರಳ, ತಮಿಳುನಾಡು , ಪಾಂಡಿಚೇರಿ ಮತ್ತು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಶತಾಯಗತಾಯ ಗೆಲ್ಲುವ ಪಣ ತೊಟ್ಟಿದೆ.

ರಾಜ್ಯದಲ್ಲಿ ಯಶಸ್ವಿ ಆಡಳಿತ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್​ ನಾಯಕರಿಗೆ ಮಣೆ ಹಾಕಿರುವ ಎಐಸಿಸಿ ವರಿಷ್ಠರು ಬೇರೆ ರಾಜ್ಯದ ವಿಧಾನಸಭಾ ಚುನಾವಣೆಯ ಚುಕ್ಕಾಣಿಯ ಜವಾಬ್ದಾರಿಯನ್ನು ರಾಜ್ಯ ನಾಯಕರಿಗೆ ನೀಡಿದ್ದಾರೆ. ಸದ್ಯ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ಹಾಗೂ ಇಂಧನ ಸಚಿವ ಕೆ.ಜೆ ಜಾರ್ಜ್​ಗೆ ಮಣೆ ಹಾಕಿದೆ.

ಇದನ್ನೂ ಓದಿ : ಕಾಂಗ್ರೆಸ್, ಓವೈಸಿ ಪಕ್ಷದ ಜೊತೆ ಬಿಜೆಪಿ ಮೈತ್ರಿ! ದೇವೇಂದ್ರ ಫಡ್ನವೀಸ್ ಖಡಕ್ ಸೂಚನೆ

ಎಐಸಿಸಿಯಿಂದ ಇಂದು ಹಿರಿಯ ಚುನಾವಣಾ ವೀಕ್ಷಕರ ಪಟ್ಟಿ ಬಿಡುಗಡೆಗೊಂಡಿದ್ದು ಈ ಪಟ್ಟಿಯಲ್ಲಿ ಡಿ.ಕೆ ಶಿವಕುಮಾರ್​ ಹಾಗೂ ಕೆ.ಜೆ ಜಾರ್ಜ್ ಸ್ಥಾನ ಪಡೆದಿದ್ದಾರೆ. ಆಸ್ಸಾಂ ಚುನಾವಣೆಯಲ್ಲಿ ಭೂಪೇಶ್​ ಬಾಗೆಲ್​, ಬಂಧು ಟಿರ್ಕೆ ಎಂಬವರ ಜೊತೆ ಡಿ.ಕೆ ಶಿವಕುಮಾರ್​ ಕೂಡ ಹಿರಿಯ ಚುನಾವಣಾ ವೀಕ್ಷಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಅಂತೆಯೇ ಕೇರಳ ವಿಧಾನಸಭಾ ಚುನಾವಣೆ ಪ್ರಕ್ರಿಯೆಯಲ್ಲಿ ಸಚಿನ್​ ಪೈಲಟ್​, ಇಮ್ರಾನ್​ ಪ್ರತಾಪ್​ ಗರ್ರ್ಹಿ, ಕನ್ನಯ್ಯ ಕುಮಾರ್​ ಅವರೊಂದಿಗೆ ಕೆ.ಜೆ ಜಾರ್ಜ್​ ಕೂಡ ಹಿರಿಯ ಚುನಾವಣಾ ವೀಕ್ಷಕ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : ಸಾಸ್ತಾನ – ಪಾಂಡೇಶ್ವರದಲ್ಲಿ ಸು ಫ್ರಂ ಸೋ ಮಾದರಿಯ ಕೃತ್ಯ: ಸ್ನಾನಗೃಹ ಇಣುಕಿ ಪರಾರಿ, ಗ್ರಾಮಸ್ಥರಲ್ಲಿ ಆತಂಕ

ಕಳೆದ ಬಿಹಾರ ಚುನಾವಣೆಯಲ್ಲಿಯೂ ಡಿ.ಕೆ ಶಿವಕುಮಾರ್​ ಬೆಂಗಳೂರಿನಲ್ಲಿ ವಾಸವಿರುವ ಬಿಹಾರಿಗಳ ಮತಸೆಳೆಯುವ ಜವಾಬ್ದಾರಿ ಹೊತ್ತಿದ್ದರು. ನೀವು ಬಿಹಾರದಲ್ಲಿ ಕಾಂಗ್ರೆಸ್​ ಪಕ್ಷವನ್ನು ಗೆಲ್ಲಿಸಿದರೆ ಕರ್ನಾಟಕದಲ್ಲಿ ನನ್ನನ್ನು ಗೆಲ್ಲಿಸಿದಂತೆ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸುವ ಹೇಳಿಕೆ ನೀಡಿದ್ದರು.

ಇದೀಗ ಆಸ್ಸಾಂ ಚುನಾವಣೆ ಗೆಲುವು ಕೂಡ ಡಿ.ಕೆ ಶಿವಕುಮಾರ್​ ಹೆಗಲೇರಿದ್ದು ಇದನ್ನು ಸಮರ್ಥವಾಗಿ ನಿಭಾಯಿಸಿ ಹೈಕಮಾಂಡ್​ ಮನಗೆಲ್ಲುವಲ್ಲಿ ಯಶಸ್ವಿಯಾಗ್ತಾರಾ ಅನ್ನೋದನ್ನ ಕಾಲವೇ ಉತ್ತರಿಸಬೇಕಿದೆ.

Senior election observers appointed for Assam, Kerala DK Shivakumar KJ George get positions

Exit mobile version