ಸ್ಯಾನಿಟರಿ ಪ್ಯಾಡ್​ ಬಳಕೆಗೆ ಬ್ರೇಕ್​ : ಸರ್ಕಾರದಿಂದ ವಿದ್ಯಾರ್ಥಿನಿಯರಿಗೆ ಸಿಗಲಿದೆ ಮುಟ್ಟಿನ ಕಪ್​

ಶಾಲಾ ವಿದ್ಯಾರ್ಥಿನಿಯರ ಆರೋಗ್ಯ ಮತ್ತು ನೈರ್ಮಲ್ಯದ ವಿಚಾರದಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ 9ನೇ ತರಗತಿಯಿಂದ 12ನೇ ತರಗತಿಯವರೆಗೆ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಮುಟ್ಟಿನ ಕಪ್​ ವಿತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಸ್ಯಾನಿಟರಿ ಪ್ಯಾಡ್​ಗಳ ಬಳಕೆಗೆ ತಿಲಾಂಜಲಿ ಹಾಡಲು ರಾಜ್ಯ ಸರ್ಕಾರ ಮುಂದಾಗಿದೆ,
ಸ್ಯಾನಿಟರಿ ಪ್ಯಾಡ್​ಗಳಿಂದ ಪರಿಸರಕ್ಕೆ ಹಾಗೂ ರಾಜ್ಯದ ಖಜಾನೆ ಎರಡಕ್ಕೂ ಹೊರೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಸ್ಯಾನಿಟರಿ ಪ್ಯಾಡ್​ಗಳನ್ನು ಕೇವಲ 1 ಬಾರಿ ಮಾತ್ರ ಬಳಕೆ ಮಾಡಬಹುದಾದ ಹಿನ್ನೆಲೆಯಲ್ಲಿ ರಾಜ್ಯದ 1 ಮಿಲಿಯನ್​ಗೂ ಅಧಿಕ ವಿದ್ಯಾರ್ಥಿನಿಯರಿಗೆ ಇದನ್ನು ಪೂರೈಸುವುದು ನಿಜಕ್ಕೂ ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊರೆ ತಂದೊಡ್ಡಿತ್ತು. ಆದರೆ ಮುಟ್ಟಿನ ಕಪ್​ಗಳನ್ನು 10 ವರ್ಷಗಳ ಕಾಲ ಮರುಬಳಕೆ ಮಾಡಬಹುದಾಗಿದೆ. ಇದರಿಂದಾಗಿ ರಾಜ್ಯ ಸರ್ಕಾರಕ್ಕೆ ವಾರ್ಷಿಕ 16 ಕೋಟಿ ರೂಪಾಯಿ ಉಳಿತಾಯವಾಗಲಿದೆ. ಜೊತೆಯಲ್ಲಿ ಪರಿಸರಕ್ಕೆ ಟನ್​ಗಟ್ಟಲೇ ಪ್ಯಾಡ್​ ಕಸ ಸೇರುವುದು ಕೂಡ ತಪ್ಪಲಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳ ಸುರಕ್ಷತೆಗಾಗಿ ಶಿಕ್ಷಣ ಇಲಾಖೆಯಿಂದ ನಿಯಮ ಜಾರಿ : ಧ್ವಜಾರೋಹಣಕ್ಕೆ ವಿದ್ಯಾರ್ಥಿಗಳನ್ನು ಬಳಸುವಂತಿಲ್ಲ

ಆದರೆ ಮುಟ್ಟಿನ ಕಪ್​ಗಳನ್ನು ಶರೀರದ ಒಳಭಾಗದಲ್ಲಿ ಧರಿಸಬೇಕಾದ ಕಾರಣ, ಇದಕ್ಕೆ ಸೂಕ್ತ ತರಬೇತಿಯ ಅಗತ್ಯವಿದೆ. ಅಲ್ಲದೇ ಪ್ರತಿ ತಿಂಗಳು ಇದನ್ನು ಬಳಕೆ ಮಾಡುವ ಮುನ್ನ ಸ್ವಚ್ಛತಾ ವಿಧಾನ ಹೇಗಿರಬೇಕು ಎಂಬುದರ ಬಗ್ಗೆ ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಸರ್ಕಾರದ ಮುಂದಿದೆ. ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತಲ್ಲಿ ರಾಜ್ಯ ಸರ್ಕಾರಕ್ಕೆ ನಿಜಕ್ಕೂ ಇದು ಬಹುದೊಡ್ಡ ಪ್ರಮಾಣದಲ್ಲಿ ಲಾಭ ತಂದುಕೊಡಲಿದೆ.

Exit mobile version