ಕ್ಲೈಮ್ಯಾಕ್ಸ್ ಹಂತ ತಲುಪಿದ ನವೆಂಬರ್ ಕ್ರಾಂತಿ : ಸಿದ್ದರಾಮಯ್ಯ – ಡಿಕೆಶಿ ನಡುವೆ ರಾಜಿ ಸಂಧಾನಕ್ಕೆ ಮುಂದಾದ ಹೈಕಮಾಂಡ್​

Karnataka November Revolution climax : ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ನಾಯಕತ್ವ ಗೊಂದಲ ಪರಿಹಾರಕ್ಕೆ ಕೊನೆಗೂ ಕಾಂಗ್ರೆಸ್​ ಹೈಕಮಾಂಡ್​ ಮದ್ದು ಅರೆದಿದೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್​ ನಡುವೆ ಸಂಧಾನ ಅಸ್ತ್ರ ಪ್ರಯೋಗಿಸಲು ಸಿದ್ಧವಾಗಿರುವ ಹೈಕಮಾಂಡ್​ ಇಬ್ಬರಿಗೂ ದೆಹಲಿಗೆ ಬುಲಾವ್​ ನೀಡಿದೆ.

ಸರ್ಕಾರ ನಿರ್ಮಾಣದ ಸಂದರ್ಭದಲ್ಲಿ ನೀಡಿದ್ದ ಪವರ್​ ಶೇರಿಂಗ್​ ಆಶ್ವಾಸನೆಯ ನಿಯಮಾವಳಿಗಳನ್ನು ಮುಂದಿಟ್ಟುಕೊಂಡೇ ಈ ಸಂಧಾನ ನಡೆಯಲಿದೆ ಎನ್ನಲಾಗಿದೆ. ಈ ಸಂಧಾನ ಸಭೆಗೆ ನವೆಂಬರ್​ 29ರಂದು ಮುಹೂರ್ತ ಫಿಕ್ಸ್​ ಮಾಡಲಾಗಿದೆ.

ನಾಯಕತ್ವ ಗೊಂದಲಕ್ಕೆ ಪರಿಹಾರ ಹುಡುಕಲು ಬೆಂಗಳೂರಿಗೆ ಆಗಮಿಸಿದ್ದ ಮಲ್ಲಿಕಾರ್ಜುನ ಖರ್ಗೆ ಇಲ್ಲಿನ ಗ್ರೌಂಡ್​ ರಿಪೋರ್ಟ್​ನ್ನು ಸೋನಿಯಾ ಮತ್ತು ರಾಹುಲ್​ ಗಾಂಧಿ ಸೇರಿದಂತೆ ಪಕ್ಷದ ವರಿಷ್ಠರಿಗೆ ರವಾನಿಸಿದ್ದಾರೆ.

ಪಕ್ಷದಲ್ಲಿ ಒಗ್ಗಟ್ಟಿಗಿಂತ ಮುಖ್ಯವಾದದ್ದು ಯಾವುದೂ ಇಲ್ಲ. ನಮ್ಮಲ್ಲೇ ಬಂಡಾಯ ಆರಂಭಗೊಂಡರೆ ಅದರಿಂದ ವಿಪಕ್ಷಗಳಿಗೆ ಲಾಭವೇ ಹೊರತು ನಮಗಲ್ಲ ಎಂಬರ್ಥದಲ್ಲಿ ಸಂಧಾನ ನಡೆಸುವುದು ಹೈಕಮಾಂಡ್ ಪ್ಲಾನ್​ ಎನ್ನಲಾಗಿದೆ.

ಪವರ್​ ಶೇರಿಂಗ್​ ವಿಚಾರದಲ್ಲಿ ಹೈಕಮಾಂಡ್​ ಯಾವ ರೀತಿಯ ನಿರ್ಧಾರ ಕೈಗೊಳ್ಳಬಹುದು ಎಂಬ ಕುತೂಹಲ ಎಲ್ಲರಲ್ಲೂ ಹೆಚ್ಚಿದೆ. ಆದರೆ ಹೈಕಮಾಂಡ್​ನ ಯಾವುದೇ ನಿರ್ಧಾರಕ್ಕೂ ಬದ್ಧರಾಗಿ ಇರುವುದಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್​ ಇಬ್ಬರೂ ತಿಳಿಸಿದ್ದಾರೆ ಎನ್ನಲಾಗಿದೆ.

ಕಳೆದ ಎರಡೂವರೆ ವರ್ಷಗಳಲ್ಲಿ ಸರ್ಕಾರದಲ್ಲಿದ್ದ ಒಗ್ಗಟ್ಟು ಯಾವುದೇ ಕಾರಣಕ್ಕೂ ಕಡಿಮೆಯಾಗದಂತೆ ನೋಡಿಕೊಳ್ಳಬೇಕೆಂದು ರಾಜ್ಯ ನಾಯಕರಿಗೆ ಸಂಧಾನ ಸಭೆಯಲ್ಲಿ ವರಿಷ್ಠರು ಖಡಕ್​ ಸೂಚನೆ ನೀಡುವ ಸಾಧ್ಯತೆಯಿದೆ.

ನಮ್ಮ ನಡುವಿನ ಒಳಜಗಳ ವಿಪಕ್ಷಗಳಿಗೆ ಅಸ್ತ್ರವಾಗಬಾರದು. ಅಧಿಕಾರಕ್ಕಿಂತ ಒಗ್ಗಟ್ಟು ಮುಖ್ಯ ಎಂದು ಎರಡೂ ಬಣಗಳ ನಾಯಕರಿಗೆ ಬುದ್ಧಿವಾದ ಹೇಳುವ ನಿರ್ಧಾರಕ್ಕೆ ಹೈಕಮಾಂಡ್​ ಬಂದಿದೆ ಎನ್ನಲಾಗಿದ್ದು, ಈ ರಾಜಿ ಸಂಧಾನ ಯಶಸ್ವಿಯಾಗುತ್ತಾ ಇಲ್ಲವಾ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.

Karnataka November Revolution climax compromise between Siddaramaiah and DK Shivakumar

Exit mobile version