ದ್ವಿಭಾಷಾ ನೀತಿ ಮರುಪರಿಶೀಲನೆಗೆ ರಾಜ್ಯಪಾಲರ ನಿರ್ದೇಶನ : ಕರವೇ ಪ್ರತಿಭಟನೆ

ರಾಜ್ಯದಲ್ಲಿ ಸದ್ಯ ದ್ವಿಭಾಷಾ ನೀತಿ ಜಾರಿಗೆ ತರುವ ರಾಜ್ಯ ಸರ್ಕಾರದ ನಿಲುವು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕನ್ನಡ ಪರ ಹೋರಾಟಗಾರರು ಹಾಗೂ ಸ್ಥಳೀಯ ಭಾಷೆಗಳ ಸಂರಕ್ಷಾ ವೇದಿಕೆಗಳ ನಡುವೆ ಪರ ವಿರೋಧದ ಚರ್ಚೆಗೆ ವೇದಿಕೆಯಾಗಿದೆ. ಕನ್ನಡ ಪರ ಹೋರಾಟಗಾರರ ಜೊತೆ ನಿಂತಿರುವ ರಾಜ್ಯ ಸರ್ಕಾರವು ಎಸ್​.ಎಸ್​.ಎಲ್​ಸಿಯಲ್ಲಿ ತೃತೀಯ ಭಾಷೆಗೆ ಅಂಕ ನೀಡುವುದನ್ನು ಕೈಬಿಟ್ಟು ಕೇವಲ ಗ್ರೇಡಿಂಗ್​ ನೀಡುವ ಪರೀಕ್ಷಾ ಹೊರೆಯನ್ನು ಕಡಿಮೆ ಮಾಡುವುದರಲ್ಲಿದೆ. ಆದರೆ ಇದಕ್ಕೆ ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘವು ತೀವ್ರ ವಿರೋಧ ವ್ಯಕ್ತಪಡಿಸಿದ್ದು , ಅಂಕಗಳ ಬದಲು ಗ್ರೇಡಿಂಗ್​ ನೀಡಿದರೆ ವಿದ್ಯಾರ್ಥಿಗಳು ಆ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಆರೋಪಿಸಿದ್ದರು.

ಈ ಸಂಬಂಧ ರಾಜ್ಯಪಾಲರಿಗೂ ಪತ್ರ ಬರೆದಿದ್ದ ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘವು , ತೃತೀಯ ಭಾಷೆಗಳಿಗೆ ಗ್ರೇಡಿಂಗ್​ ನೀಡದಂತೆ ಮನವಿ ಮಾಡಿತ್ತು. ಇದಾದ ಬಳಿಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದ ರಾಜ್ಯಪಾಲರು, ಹಿಂದಿ ಭಾಷೆಗೆ ಗ್ರೇಡಿಂಗ್​ ನೀಡುವ ರಾಜ್ಯ ಸರ್ಕಾರದ ಕ್ರಮವನ್ನು ಮರುಪರಿಶೀಲಿಸುವಂತೆ ನಿರ್ದೇಶನ ನೀಡಿದ್ದರು. ರಾಜ್ಯಪಾಲರ ಈ ನಡೆಗೆ ಇದೀಗ ಕನ್ನಡಪರ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಹಿಂದಿ ಭಾಷಗೆ ಗ್ರೇಡ್​ ನೀಡುವಿಕೆಗೆ ವಿರೋಧಿಸಿದ ರಾಜ್ಯಪಾಲರ ವಿರುದ್ಧ ಕರವೇ ಪ್ರತಿಭಟನೆ ಕೈಗೊಂಡಿದೆ.
ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಾರಾಯಣ ಗೌಡ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ಕೈಗೊಂಡಿದ್ದು , ಘೋಷಣೆ ಕೂಗುವ ಮೂಲಕ ರಾಜ್ಯಪಾಲರ ನಡೆಯನ್ನು ಖಂಡಿಸುತ್ತಿದ್ದಾರೆ. ಕನ್ನಡಾಂಬೆಯ ಮಕ್ಕಳ ಮೇಲೆ ಹಿಂದಿ ಹೇರಿಕೆ ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ಈ ಸಂಬಂಧ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ, ನಮ್ಮ ರಾಜ್ಯದ ವಿದ್ಯಾರ್ಥಿಗಳ ಮೇಲೆ ಬಲವಂತವಾಗಿ ಹಿಂದಿ ಹೇರಿಕೆಗೆ ಮುಂದಾದರೆ,ರಕ್ತಕ್ರಾಂತಿಗೆ ಕರವೇ ಕರೆ ನೀಡಬೇಕಾಗುತ್ತದೆ. ಹಿಂದಿ ಮುಂದಿಟ್ಟುಕೊಂಡು ಭಾರತ ಒಡೆಯುವ ಕೆಲಸ ಮಾಡಬೇಡಿ ಎಂದು ಕೇಂದ್ರ ಮತ್ತು ರಾಜ್ಯ ಬಿಜೆಪಿ ಮುಖಂಡರ ವಿರುದ್ಧ ನಾರಾಯಣ ಗೌಡ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಶಾಲಾ – ಕಾಲೇಜುಗಳ ವಿದ್ಯಾರ್ಥಿಗಳಿಗೆ ಶೀಘ್ರದಲ್ಲೇ ಗುಡ್​ನ್ಯೂಸ್​..! ದ್ವಿತೀಯ ಪಿಯುಸಿವರೆಗೆ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಭಾಗ್ಯ

ಈ ಹಿಂದೆ ಸೋಶಿಯಲ್​ ಮೀಡಿಯಾ ಪೋಸ್ಟ್​ ಮೂಲಕವೂ ನಾರಾಯಣ ಗೌಡ ಕಿಡಿಕಾರಿದ್ದರು. ಗ್ರೇಡಿಂಗ್​ ವಿಚಾರದಲ್ಲಿ ಮೂಗು ತೂರಿಸುತ್ತಿರುವ ರಾಜ್ಯಪಾಲ ಥಾವರ್​ಚಾಂದ್​ ಗೆಹ್ಲೋಟ್​ ಅವರ ನಡೆಯನ್ನು ಅಧಿಕ ಪ್ರಸಂಗತನ ಎಂದು ಕರೆದಿದ್ದರು. ನೀವು ಜನರಿಂದ ಆಯ್ಕೆಯಾದ ಜನಪ್ರತಿನಿಧಿಯಲ್ಲ. ಜನರಿಂದ ಆಯ್ಕೆಯಾದ ಸರ್ಕಾರವು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೆ ಮೂಗು ತೂರಿಸುವ ಅಧಿಕಾರ ನಿಮಗಿಲ್ಲ ಎಂದು ಖಾರವಾಗಿಯೇ ಪೋಸ್ಟ್​ ಮಾಡಿದ್ದರು.

Exit mobile version