ಬೆಂಗಳೂರು : ದೇಶದಲ್ಲೇ ಅತ್ಯಂತ ಸಿರಿವಂತ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಹೊರಹೊಮ್ಮಿದ್ದಾರೆ. ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಆಸ್ತಿಪಾಸ್ತಿ ವಿವರಗಳನ್ನು ಒಳಗೊಂಡ ನೂತನ ವರದಿಯೊಂದನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥೆ ಪ್ರಕಟಿಸಿದೆ. ಒಟ್ಟು 31 ಮುಖ್ಯಮಂತ್ರಿಗಳ ಆಸ್ತಿ ವಿಶ್ಲೇಷಣೆ ನಡೆಸಲಾಗಿದ್ದು, ಈ ಪೈಕಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬರೋಬ್ಬರಿ 1,413 ಕೋಟಿ ರೂಪಾಯಿ ಮೌಲ್ಯದ ಆಸ್ತಿಯೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಎಡಿಆರ್ ವರದಿಯ ಪ್ರಕಾರ, ದೇಶದ 31 ಮುಖ್ಯಮಂತ್ರಿಗಳಲ್ಲಿ ನಾಲ್ವರು ಶತಕೋಟ್ಯಾಧಿಪತಿಗಳಾಗಿದ್ದು, ಒಟ್ಟಾರೆ 3,660 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು 931 ಕೋಟಿ ರೂ. ಮತ್ತು ತಮಿಳುನಾಡಿನ ವಿಜಯ್ 648 ಕೋಟಿ ರೂ.ಗಳ ಆಸ್ತಿ ಮೌಲ್ಯ ಹೊಂದುವ ಮೂಲಕ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ. ಅರುಣಾಚಲ ಪ್ರದೇಶದ ಪೇಮಾ ಖಂಡು 332 ಕೋಟಿ ರೂಪಾಯಿ ಆಸ್ತಿಯೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಅತ್ಯಂತ ಕಡಿಮೆ ಆಸ್ತಿ ಹೊಂದಿರುವವರ ಪೈಕಿ ಜಮ್ಮು-ಕಾಶ್ಮೀರದ ಒಮರ್ ಅಬ್ದುಲ್ಲಾ 55.24 ಲಕ್ಷ ರೂಪಾಯಿ ಆಸ್ತಿ ಹೊಂದಿದ್ದು ಈ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. ಪಶ್ಚಿಮ ಬಂಗಾಳದ ಸುವೇಂದು ಅಧಿಕಾರಿ 85.87 ಲಕ್ಷ ರೂ. ಮತ್ತು ರಾಜಸ್ಥಾನದ ಭಜನ್ ಲಾಲ್ ಶರ್ಮಾ 1.46 ಕೋಟಿ ರೂಪಾಯಿಗೂ ಹೆಚ್ಚಿನ ಆಸ್ತಿ ಹೊಂದುವ ಮೂಲಕ ನಂತರದ ಸ್ಥಾನಗಳಲ್ಲಿದ್ದಾರೆ.
ಇನ್ನು ಎಡಿಆರ್ ವರದಿಯಲ್ಲಿ ಮತ್ತೊಂದು ಪ್ರಮುಖ ಮಾಹಿತಿ ಹೊರಬಿದ್ದಿದ್ದು, ದೇಶದ ಒಟ್ಟೂ 31 ಸಿಎಂಗಳ ಪೈಕಿ 14 ಮಂದಿಯ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ 14 ಮಂದಿಯಲ್ಲಿ 11 ಸಿಎಂಗಳ ವಿರುದ್ಧ ಗಂಭೀರ ಪ್ರಮಾಣದ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
DK Shivakumar richest deputy cm ADR Report
