Bengaluru Namma Metro Ticket Price Hike hold: ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ದೊಡ್ಡ ಸಮಾಧಾನದ ಸುದ್ದಿ ಸಿಕ್ಕಿದೆ. ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ ಎಂಬ ಆತಂಕಕ್ಕೆ ಸದ್ಯ ತೆರೆ ಬಿದ್ದಿದೆ. ಬರುವ ಸೋಮವಾರದಿಂದ (ಫೆಬ್ರವರಿ 9) ಜಾರಿಗೆ ಬರಬೇಕಿದ್ದ ಮೆಟ್ರೋ ಟಿಕೆಟ್ ದರ ಏರಿಕೆಯನ್ನು ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ತಡೆಹಿಡಿದಿದೆ.
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejaswi Surya) ಅವರು ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ಫೋನ್‌ನಲ್ಲಿ ಚರ್ಚೆ ನಡೆಸಿ, ದರ ಏರಿಕೆ ನಿರ್ಧಾರಕ್ಕೆ ಬ್ರೇಕ್ ಹಾಕುವಂತೆ ಮನವಿ ಮಾಡಿದ್ದರು. ಬೆಂಗಳೂರು ಮೆಟ್ರೋ ಈಗಾಗಲೇ ದೇಶದಲ್ಲೇ ಅತ್ಯಂತ ದುಬಾರಿಯಾಗಿದೆ ಎಂದು ಅವರು ಸಚಿವರಿಗೆ ವಿವರಿಸಿದ್ದರು.
ಸಂಸದರ ಮನವಿಗೆ ಸ್ಪಂದಿಸಿದ ಸಚಿವರು, ಸೋಮವಾರದಿಂದ ದರ ಏರಿಕೆ ಜಾರಿಗೆ ತರದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಲ್ಲದೆ, ದರ ನಿಗದಿ ಸಮಿತಿಯ (FFC) ವಿಚಾರದಲ್ಲಿ ಆಗಿರುವ ಗೊಂದಲಗಳ ಬಗ್ಗೆ ಮರುಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಈ ದರ ಏರಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವೆ ‘ಬ್ಲೇಮ್ ಗೇಮ್’ ಶುರುವಾಗಿತ್ತು. ದರ ನಿಗದಿ ಸಮಿತಿ (FFC) ಕೇಂದ್ರದ್ದು ಎಂದು ರಾಜ್ಯ ಸರ್ಕಾರ ಹೇಳಿದರೆ, ಸಮಿತಿ ರಚನೆಗೆ ಮನವಿ ಮಾಡುವ ಅಧಿಕಾರ ರಾಜ್ಯಕ್ಕೇ ಇದೆ ಎಂದು ಬಿಜೆಪಿ ವಾದಿಸಿತ್ತು. ಒಂದು ವೇಳೆ ದರ ಏರಿಕೆಯಾಗಿದ್ದರೆ, ಕನಿಷ್ಠ ದರ 11 ರೂ. ಹಾಗೂ ಗರಿಷ್ಠ ದರ 95 ರೂ. ಆಗುತ್ತಿತ್ತು.
ಈ ದರ ಏರಿಕೆ ವಿಚಾರವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ವಾಕ್ಸಮರ ನಡೆದಿತ್ತು. ಸದ್ಯ ಕೇಂದ್ರದ ಈ ನಿರ್ಧಾರದಿಂದಾಗಿ ಲಕ್ಷಾಂತರ ಮೆಟ್ರೋ ಪ್ರಯಾಣಿಕರು ಹೆಚ್ಚುವರಿ ಹಣ ಪಾವತಿಸುವ ಆತಂಕದಿಂದ ಪಾರಾಗಿದ್ದಾರೆ.
