ರಾಜ್ಯದ ಹೈನುಗಾರರಿಗೆ ಬಮೂಲ್ ಭರ್ಜರಿ ಕೊಡುಗೆ: ಪ್ರತಿ ಲೀಟರ್ ಹಾಲಿಗೆ 2 ರೂ. ಹೆಚ್ಚುವರಿ ಪ್ರೋತ್ಸಾಹಧನ

ಬೆಂಗಳೂರು: Bamul: ರಾಜ್ಯದ ಬೆನ್ನೆಲುಬಾಗಿರುವ ರೈತರಿಗೆ ಹಾಗೂ ಹೈನುಗಾರಿಕೆಯನ್ನು ನಂಬಿಕೊಂಡಿರುವ ಕುಟುಂಬಗಳಿಗೆ ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ಸಿಹಿ ಸುದ್ದಿ ನೀಡಿದೆ.

ಹೈನುಗಾರಿಕೆಯನ್ನು ಮತ್ತಷ್ಟು ಲಾಭದಾಯಕವಾಗಿಸಲು ಮತ್ತು ರೈತರನ್ನು ಪ್ರೋತ್ಸಾಹಿಸಲು ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿಯಾಗಿ 2 ರೂಪಾಯಿ ಪ್ರೋತ್ಸಾಹಧನ ನೀಡಲು ನಿರ್ಧರಿಸಲಾಗಿದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್(D. K. Suresh) ತಿಳಿಸಿದ್ದಾರೆ.

ಹೈನುಗಾರಿಕೆಗೆ ಆನೆಬಲ:

ಪ್ರಸ್ತುತ ಕರ್ನಾಟಕದಲ್ಲಿ ಕ್ಷೀರ ಕ್ರಾಂತಿ ಹೊಸ ಮೈಲಿಗಲ್ಲು ತಲುಪಿದ್ದು, ಪ್ರತಿದಿನ ಸುಮಾರು ಒಂದು ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ರಾಜ್ಯ ಸರ್ಕಾರವು ಈಗಾಗಲೇ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಪ್ರೋತ್ಸಾಹಧನವನ್ನು ನೀಡುತ್ತಿದೆ. ಇದರ ಜೊತೆಗೆ ಈಗ ಬಮೂಲ್ ಘೋಷಿಸಿರುವ 2 ರೂಪಾಯಿ ಹೆಚ್ಚುವರಿ ಮೊತ್ತ ಸೇರಿದರೆ, ರೈತರಿಗೆ ಒಟ್ಟು 7 ರೂಪಾಯಿ ಪ್ರೋತ್ಸಾಹಧನ ಸಿಕ್ಕಂತಾಗುತ್ತದೆ. ಈ ನಿರ್ಧಾರದಿಂದಾಗಿ ನಂದಿನಿಗೆ ಹಾಲು ಪೂರೈಸುವ ಲಕ್ಷಾಂತರ ಹೈನುಗಾರರ ಆರ್ಥಿಕ ಸ್ಥಿತಿ ಸುಧಾರಿಸಲಿದೆ.

ಹಳೆಯ ನಿರ್ಧಾರಕ್ಕೆ ಈಗ ಚಾಲನೆ:

ವಿಶೇಷವೆಂದರೆ, ಪ್ರತಿ ಲೀಟರ್ ಹಾಲಿಗೆ 2 ರೂಪಾಯಿ ಹೆಚ್ಚಿಸುವ ಈ ಪ್ರಸ್ತಾವನೆಯನ್ನು 2019ರಲ್ಲಿಯೇ ಕೈಗೊಳ್ಳಲಾಗಿತ್ತು. ಆದರೆ ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಕಳೆದ ಆರು ವರ್ಷಗಳಿಂದ ಈ ಯೋಜನೆ ಜಾರಿಗೆ ಬಂದಿರಲಿಲ್ಲ. ಇದೀಗ ಕೆಎಂಎಫ್ (KMF) ಅಂಗಸಂಸ್ಥೆಯಾದ ಬಮೂಲ್ ಈ ಯೋಜನೆಯನ್ನು ಜಾರಿಗೆ ತರಲು ಗಂಭೀರ ಚಿಂತನೆ ನಡೆಸಿದ್ದು, ಹೈನುಗಾರಿಕೆಗೆ ಹೊಸ ಉತ್ತೇಜನ ನೀಡಲು ಮುಂದಾಗಿದೆ.

Also Read: ಸಮೋಸಾ ವ್ಯಾಪಾರಿಯ ಸಿನಿಮಾ ಸ್ಟೈಲ್ ದರೋಡೆ ಸ್ಕೆಚ್ : ಶ್ರೀಮಂತನಾಗುವ ಆಸೆಗೆ ಈಗ ಜೈಲೇ ಗತಿ !

ರೈತರ ಹಿತರಕ್ಷಣೆಯೇ ಗುರಿ:

ದಿನೇ ದಿನೇ ಹೈನುಗಾರಿಕೆಯ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಮೇವಿನ ಬೆಲೆ ಏರಿಕೆ ಮತ್ತು ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಈ ಹೆಚ್ಚುವರಿ ಪ್ರೋತ್ಸಾಹಧನ ಬಹಳ ಸಹಕಾರಿಯಾಗಲಿದೆ. “ರೈತರು ಹಾಲಿನ ಉತ್ಪಾದನೆಯಲ್ಲಿ ಹೆಚ್ಚು ಆಸಕ್ತಿ ವಹಿಸುವಂತೆ ಮಾಡುವುದು ಮತ್ತು ಅವರಿಗೆ ನ್ಯಾಯಯುತ ಬೆಲೆ ಕೊಡಿಸುವುದು ನಮ್ಮ ಮೂಲ ಉದ್ದೇಶ,” ಎಂದು ಡಿ.ಕೆ. ಸುರೇಶ್ ಈ ಸಂದರ್ಭದಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ.

Exit mobile version