ಕನ್ನಡಿಗರಿಗೆ ಭಾರೀ ನಿರಾಶೆ : ರೈಲ್ವೆ ಇಲಾಖೆ ಪರೀಕ್ಷೆಯಲ್ಲಿ ಮಾತೃಭಾಷೆಗಿಲ್ಲ ಸ್ಥಾನ..!

ರೈಲ್ವೆ ಇಲಾಖೆಗಳಿಗೆ ಸಂಬಂಧಿಸಿದ ಪರೀಕ್ಷೆಗಳಲ್ಲಿ ಪ್ರಾದೇಶಿಕ ಭಾಷೆಯನ್ನು ಆಯ್ಕೆಮಾಡಿಕೊಳ್ಳುವ ಅವಕಾಶವನ್ನು ಸರ್ಕಾರವೇ ನೀಡಿದೆ. ಆದರೆ ಹುಬ್ಬಳ್ಳಿ ವಲಯದ ಸ್ಟೇಷನ್​ ಮಾಸ್ಟರ್​ ಹುದ್ದೆಗೆ ನಡೆಯಬೇಕಿದ್ದ ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ ಕೊಕ್​ ನೀಡಲಾಗಿದ್ದು ಕನ್ನಡಪರ ಸಂಘಟನೆಗಳ ಕಣ್ಣು ಕೆಂಪಗಾಗಿಸಿದೆ.
ನೈಋತ್ಯ ರೈಲ್ವೆ ಹುಬ್ಬಳ್ಳಿ ವಲಯದಲ್ಲಿ ಮುಂಬಡ್ತಿ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಮಾರ್ಚ್​ 2ರವರೆಗೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. 45 ಹುದ್ದೆಗಳ ನೇಮಕಾತಿಗೆ ನಡೆಯಲಿರುವ ಈ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಕಿತ್ತೆಸೆಯಲಾಗಿದ್ದು ಕೇವಲ ಇಂಗ್ಲೀಷ್​ ಹಾಗೂ ಹಿಂದಿ ಭಾಷೆಗೆ ಮಾತ್ರ ಅವಕಾಶ ನೀಡಲಾಗಿದೆ. ಪ್ರಾದೇಶಿಕ ಭಾಷೆಯ ಆಧಾರದಲ್ಲಿ ಕನ್ನಡಕ್ಕೆ ಸ್ಥಾನ ನೀಡದ ಕೇಂದ್ರ ಸರ್ಕಾರದ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಸೇನಾ ಅಗ್ನಿವೀರ್‌ ನೇಮಕಾತಿಗೆ ಅರ್ಜಿ ಪ್ರಕ್ರಿಯೆ ಪ್ರಾರಂಭ: ಯಾವ ಅರ್ಹತೆಯಿರಬೇಕು?

ರೈಲ್ವೆ ಇಲಾಖೆಯ ಸಿ ಹಾಗೂ ಡಿ ದರ್ಜೆಯ ಹುದ್ದೆಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು 2012ರಿಂದಲೇ ಅವಕಾಶ ನೀಡಲಾಗಿದೆ. ಆದರೂ ಕೂಡ ಇಂಗ್ಲೀಷ್​ ಮತ್ತು ಹಿಂದಿ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿರುವುದು ಕನ್ನಡ ಪರ ಹೋರಾಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ. ಕೂಡಲೇ ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶ ನೀಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಕನ್ನಡಪರ ಹೋರಾಟಗಾರರ ಎಚ್ಚರಿಕೆಯ ಬಳಿಕ ರೈಲ್ವೆ ಇಲಾಖೆ ಎಚ್ಚೆತ್ತುಕೊಂಡು ಪ್ರಾದೇಶಿಕ ಭಾಷೆಗಳಿಗೆ ಅವಕಾಶ ನೀಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

Exit mobile version