ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳೋದು ಅಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ..? ಅದರಲ್ಲೂ ಮಳೆಗಾಲದಲ್ಲಿ ಸೊಳ್ಳೆ ಕಾಟ ತುಸು ಹೆಚ್ಚೇ ಇರುತ್ತದೆ. ಸೊಳ್ಳೆಗಳ ಕಚ್ಚುವಿಕೆಯಿಂದ ಆಗುವ ನೋವು ಒಂದೆಡೆಯಾದರೆ, ಅವುಗಳ ಕಡಿತದಿಂದ ಬರುವ ಕಾಯಿಲೆಗಳ ತಲೆನೋವು ಇನ್ನೊಂದು ಕಡೆ. ಈ ಎಲ್ಲದರ ನಡುವೆ ಜಗತ್ತನ್ನು ಕಾಡುತ್ತಿರುವ ಸೊಳ್ಳೆಗಳ ಕಾಟ ಮತ್ತು ಅವುಗಳಿಂದ ಹರಡುವ ಕಾಯಿಲೆಗಳಿಗೆ ಮುಕ್ತಿ ಹಾಡಲು ಐಟಿ ದೈತ್ಯ ‘ಗೂಗಲ್’ ಸಂಸ್ಥೆ ಈಗ ಜೈವಿಕ ತಂತ್ರಜ್ಞಾನದ ಮೊರೆ ಹೋಗಿದೆ . ಹೆಣ್ಣು ಸೊಳ್ಳೆಗಳ ಸಂತಾನೋತ್ಪತ್ತಿ ಸಾಮರ್ಥ್ಯವನ್ನೇ ಕುಂಠಿತಗೊಳಿಸುವ ವಿಶಿಷ್ಟ ಯೋಜನೆಯೊಂದನ್ನು ರೂಪಿಸಲಾಗಿದ್ದು, ಇದನ್ನು ಅಮೆರಿಕದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ಸಕಲ ಸಿದ್ಧತೆಗಳು ನಡೆದಿವೆ .
ಮನುಷ್ಯರಿಗೆ ಕಚ್ಚುವ ಹೆಣ್ಣು ಸೊಳ್ಳೆಗಳನ್ನೇ ಗುರಿಯಾಗಿಸಿ ಈ ಪ್ರಯೋಗ ನಡೆಸಲಾಗುತ್ತಿದೆ. ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಕೃತಕ ಗಂಡು ಸೊಳ್ಳೆಗಳನ್ನು ಸೃಷ್ಠಿಸುತ್ತಿದ್ದಾರೆ. ಈ ಸೊಳ್ಳೆಗಳ ದೇಹಕ್ಕೆ ವೋಲ್ಬಾಚಿಯಾ ಎಂಬ ವಿಶೇಷ ಬ್ಯಾಕ್ಟೀರಿಯಾಗಳನ್ನು ಸೇರಿಸಲಾಗುತ್ತದೆ. ಮನುಷ್ಯರನ್ನು ಕಚ್ಚಿ ರೋಗ ಹರಡುವುದು ಕೇವಲ ಹೆಣ್ಣು ಸೊಳ್ಳೆಗಳು ಮಾತ್ರ ಆಗಿರುವುದರಿಂದ, ಈ ಕೃತಕ ಗಂಡು ಸೊಳ್ಳೆಗಳಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಇರುವುದಿಲ್ಲ .
ಲ್ಯಾಬ್ನಿಂದ ಬಿಡುಗಡೆಯಾದ ಈ ಗಂಡು ಸೊಳ್ಳೆಗಳು ಹೊರಗಿನ ಹೆಣ್ಣು ಸೊಳ್ಳೆಗಳೊಂದಿಗೆ ದೈಹಿಕ ಸಂಪರ್ಕ ಬೆಳೆಸುತ್ತವೆ . ಇದರ ಪರಿಣಾಮವಾಗಿ ಹೆಣ್ಣು ಸೊಳ್ಳೆಗಳು ಎಂದಿನಂತೆ ಮೊಟ್ಟೆಗಳನ್ನು ಇಡುತ್ತವೆಯಾದರೂ, ಆ ಮೊಟ್ಟೆಗಳು ಒಡೆದು ಮರಿಗಳು ಹೊರಬರುವುದಿಲ್ಲ . ಇದರಿಂದಾಗಿ ಸೊಳ್ಳೆಗಳ ಮುಂದಿನ ಪೀಳಿಗೆಯ ಬೆಳವಣಿಗೆ ಸಂಪೂರ್ಣವಾಗಿ ಸ್ಥಗಿತಗೊಂಡು, ಕೀಟಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತದೆ ಎಂಬುದು ವಿಜ್ಞಾನಿಗಳ ಲೆಕ್ಕಾಚಾರವಾಗಿದೆ.
Also Read: ಮತ್ತೆ ಏರಿದ ಪೆಟ್ರೋಲ್-ಡೀಸೆಲ್ ದರ: 10 ದಿನದಲ್ಲಿ 4ನೇ ಬಾರಿ ಬೆಲೆ ಶಾಕ್
ಇದೇ ರೀತಿಯ ಜೈವಿಕ ಪ್ರಯೋಗವನ್ನು ಈ ಹಿಂದೆ ಸಿಂಗಾಪುರದಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು . ಅಲ್ಲಿನ ಸರ್ಕಾರವು ಬ್ಯಾಕ್ಟೀರಿಯಾ ಯುಕ್ತ ಸೊಳ್ಳೆಗಳನ್ನು ಪರಿಸರಕ್ಕೆ ಬಿಡುವ ಮೂಲಕ ಸೊಳ್ಳೆಗಳ ಸಂತತಿಯನ್ನು ಯಶಸ್ವಿಯಾಗಿ ನಿಯಂತ್ರಿಸಿತ್ತು. ಇದೀಗ ಗೂಗಲ್ ಸಂಸ್ಥೆಯು ‘ಡಿಬಗ್’ ಎಂಬ ಬೃಹತ್ ಯೋಜನೆಯಡಿ ಸುಮಾರು 3.2 ಕೋಟಿ ಸೊಳ್ಳೆಗಳನ್ನು ಕ್ಯಾಲಿಫೋರ್ನಿಯಾದಲ್ಲಿ ಬಿಡುಗಡೆ ಮಾಡಲು ಅಲ್ಲಿನ ಸರ್ಕಾರದ ಅನುಮತಿ ಕೋರಿದೆ . ಮುಂದಿನ ಎರಡು ವರ್ಷಗಳಲ್ಲಿ ರೋಗಕಾರಕ ಕೀಟಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಈ ತಂತ್ರಜ್ಞಾನದ ಪ್ರಮುಖ ಗುರಿಯಾಗಿದೆ .
The mosquito menace will soon get a break Master plan in America to destroy mosquito populations
