ಸೌದಿ ಅರೇಬಿಯಾದಲ್ಲಿ ಬಸ್​ ದುರಂತ : ತೆಲಂಗಾಣದ 42 ಮಂದಿ ಸಾವು ; ಪ್ರಧಾನಿ ಮೋದಿ ಸಂತಾಪ

Saudi Arabia Bus Accident: ಸೌದಿ ಅರೇಬಿಯಾದ ಮಕ್ಕಾ – ಮದೀನಾ ರಸ್ತೆಯಲ್ಲಿ ಖಾಸಗಿ ಬಸ್​ ಹಾಗೂ ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು 42ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬಸ್​ ಸಂಪೂರ್ಣ ಹೊತ್ತಿ ಉರಿದಿದ್ದು ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಮೃತಪಟ್ಟವರಲ್ಲಿ ಬಹುತೇಕರು ಭಾರತೀಯರು ಎಂದು ತಿಳಿದು ಬಂದಿದೆ. ಮೃತಪಟ್ಟವರ ಪೈಕಿ 20 ಮಂದಿ ಮಹಿಳೆಯರು ಹಾಗೂ 12 ಮಂದಿ ವೃದ್ಧ ಪುರುಷರು ಇದ್ದರು ಎನ್ನಲಾಗಿದೆ.

ಮೃತರೆಲ್ಲರೂ ತೆಲಂಗಾಣ ಮೂಲದವರು ಎಂದು ತಿಳಿದುಬಂದಿದೆ. ರಿಯಾದ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಪಘಾತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತವಾಗಿದ್ದು ಭಾರತೀಯರ ನೆರವಿಗೆ ಧಾವಿಸಿದೆ. ಇತ್ತ ಭಾರತೀಯ ವಿದೇಶಾಂಗ ಸಚಿವಾಲಯದ ಬಳಿಯೂ ಮೃತದೇಹ ಶೀಘ್ರ ಹಸ್ತಾಂತರಕ್ಕೆ ನೆರವಾಗುವಂತೆ ಮನವಿ ಮಾಡಲಾಗಿದೆ.

ಇನ್ನು ಈ ದುರಂತದ ಸಂಬಂಧ ತೆಲಂಗಾಣ ಸರ್ಕಾರ ಸಂತಾಪ ವ್ಯಕ್ತಪಡಿಸಿದೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್​ ರೆಡ್ಡಿ ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.
ಇನ್ನು ಮೃತರ ಕುಟುಂಬಸ್ಥರಿಗೆಂದು ಸಹಾಯವಾಣಿ ತೆರೆಯಲಾಗಿದ್ದು, ಯಾವುದೇ ಮಾಹಿತಿಗಾಗಿ ಕರೆ ಮಾಡುವಂತೆ ಮನವಿ ಮಾಡಲಾಗಿದೆ.

ಮೃತರೆಲ್ಲರೂ ತೆಲಂಗಾಣ ರಾಜ್ಯಕ್ಕೆ ಸೇರಿದವರಾಗಿದ್ದು ಭಾರತದಿಂದ ನವೆಂಬರ್​ 9ನೇ ತಾರೀಖಿನಂದು ಮೆಕ್ಕಾ ಮದೀನಾ ಯಾತ್ರೆಗೆ ತೆರಳಿದ್ದರು ಎನ್ನಲಾಗಿದೆ. ಮೆಕ್ಕಾದಲ್ಲಿ ಉಮ್ರಾ ಯಾತ್ರೆ ಪೂರೈಸಿದ್ದ ಈ ತಂಡವು ಭಾನುವಾರದಂದು ಮೇದಿನಾಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಈ ಅವಘಡ ಸಂಭವಿಸಿದೆ.

ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : ಕರಾವಳಿ ಜಿಲ್ಲೆಗಳಿಗೆ ಕಾದಿದೆ ಮಳೆ

ಇನ್ನು ಈ (Saudi Arabia Bus Accident) ಘಟನೆ ಸಂಬಂಧ ಪ್ರಧಾನಿ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಪ್ರಧಾನಿ ಮೋದಿ, ಮದೀನಾದಲ್ಲಿ ಸಂಭವಿಸಿದ ಅಪಘಾತದ ಬಗ್ಗೆ ತಿಳಿದು ತೀವ್ರ ದುಃಖಿತನಾಗಿದ್ದೇನೆ.

ಈ ಅಪಘಾತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ನಿಮ್ಮ ನೋವಿನೊಂದಿಗೆ ನಾವಿದ್ದೇವೆ ಎಂದಿದ್ದಾರೆ.

Exit mobile version