ಭಾರತೀಯ ರೈಲ್ವೆ ಇಲಾಖೆಯಲ್ಲಿ ಹೊಸ ಕ್ರಾಂತಿ : ಲೋಕಾರ್ಪಣೆಗೆ ಸಿದ್ಧಗೊಂಡ ವಂದೇ ಭಾರತ್​ ಸ್ಲೀಪರ್​ ರೈಲು

ಭಾರತೀಯ ರೈಲ್ವೆ ಇಲಾಖೆಯು ದಿನಕ್ಕೊಂದು ಹೊಸತನವನ್ನು ಅಳವಡಿಸಿಕೊಳ್ಳುತ್ತಲೇ ಇದೆ. ಇದೀಗ ರೈಲ್ವೆ ಇಲಾಖೆಯಲ್ಲಿ ಹೊಸ ಕ್ರಾಂತಿ ಎಂಬಂತೆ ಭಾರತದ ಪ್ರಪ್ರಥಮ ವಂದೇ ಭಾರತ್​ ಸ್ಲೀಪರ್​ ರೈಲು ಉದ್ಘಾಟನೆಗೆ ಸಿದ್ಧಗೊಂಡಿದೆ. ಜನವರಿ ಮೂರನೇ ವಾರದಲ್ಲಿ ಪ್ರಧಾನಿ ಮೋದಿ ವಂದೇ ಭಾರತ್​ ಸ್ಲೀಪರ್​ ರೈಲಿಗೆ ಚಾಲನೆ ನೀಡಲಿದ್ದಾರೆ. ಭಾರತದ ಮೊದಲ ವಂದೇ ಭಾರತ್​ ಸ್ಲೀಪರ್​ ರೈಲು ಗುವಾಹಟಿ ಹಾಗೂ ಕೋಲ್ಕತ್ತಾ ನಡುವೆ ಸಂಚರಿಸಲಿದೆ.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​​ ಮಹತ್ವದ ಮಾಹಿತಿ ನೀಡಿದ್ದು. ಈಗಾಗಲೇ ಪರೀಕ್ಷಾರ್ಥಗಳಲ್ಲಿ ವಂದೇ ಭಾರತ್ ಸ್ಲೀಪರ್​ ಟ್ರೇನ್​ ಯಶಸ್ವಿಯಾಗಿದೆ. ಜನವರಿ 18ರಂದು ರೈಲನ್ನು ಉದ್ಘಾಟಿಸುವ ಬಗ್ಗೆ ಯೋಚನೆ ನಡೆಸಿದೆ. ಮೊದಲ ಹಂತದಲ್ಲಿ 2 ರೈಲುಗಳು ಹಳಿಗೆ ಇಳಿಯಲಿವೆ ಎಂದು ಹೇಳಿದರು.

ಎಸಿ ಸ್ಲೀಪರ್​ ಪ್ರಯಾಣದ ಅನುಭವ ಸಾಮಾನ್ಯರಿಗೂ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಕಡಿಮೆ ಟಿಕೆಟ್​ ದರ ನಿಗದಿಪಡಿಸಲಾಗಿದೆ. 3600ರೂಪಾಯಿ ಗರಿಷ್ಠ ದರದಿಂದ 2300 ರೂಪಾಯಿ ಕನಿಷ್ಠ ಟಿಕೆಟ್​ ದರ ನಿಗದಿ ಪಡಿಸಲಾಗಿದೆ. ಆಹಾರ ಸೌಲಭ್ಯವನ್ನೂ ಈ ಟಿಕೆಟ್​ ದರ ಒಳಗೊಂಡಿದೆ. 3ನೇ ಎಸಿಯಲ್ಲಿ ಆಹಾರ ಸೌಲಭ್ಯವನ್ನೂ ಒಳಗೊಂಡು 2300 ರೂಪಾಯಿ ಟಿಕೆಟ್​ ದರ ನಿಗದಿಯಾಗಿದ್ದರೆ, 2ನೇ ಎಸಿಯಲ್ಲಿ 3 ಸಾವಿರ ರೂಪಾಯಿ ಹಾಗೂ 1ನೇ ಎಸಿಯಲ್ಲಿ 3600 ರೂಪಾಯಿ ನಿಗದಿಯಾಗಿದೆ.
ಇದೇ ಸೌಲಭ್ಯಗಳೊಂದಿಗೆ ಗುವಾಹಟಿಯಿಂದ ಕೋಲ್ಕತ್ತಾಗೆ ವಿಮಾನದಲ್ಲಿ ಪ್ರಯಾಣಿಸಲು ಪ್ರಯಾಣಿಕರು 8000 ರೂಪಾಯಿ ವ್ಯಯಿಸಬೇಕಿತ್ತು. ಆದರೆ ಇದೀಗ ಅತೀ ಕಡಿಮೆ ದರದಲ್ಲಿ ಪ್ರಯಾಣಿಕರು ಐಷಾರಾಮಿ ಸಂಚಾರದ ಅನುಭವ ಪಡೆಯಬಹುದಾಗಿದೆ.

ಇದನ್ನೂ ಓದಿ: ಕರಾವಳಿ ಭಾಗದ ಜನತೆಗೆ ಗುಡ್​ನ್ಯೂಸ್​.. ಶೀಘ್ರದಲ್ಲೇ ವಂದೇ ಭಾರತ್​ ಎಕ್ಸ್​ಪ್ರೆಸ್​

ಈ ರೈಲು ರಾತ್ರಿ ವೇಳೆಯಲ್ಲಿಯೇ ಹೆಚ್ಚಾಗಿ ಸಂಚರಿಸಲಿದ್ದು ರಾತ್ರಿ ಭೋಜನ ಹಾಗೂ ಬೆಳಗ್ಗೆ ಚಹಾದ ವ್ಯವಸ್ಥೆ ಇರಲಿದೆ. ಈ ರೈಲು ಅತ್ಯಂತ ವೇಗವಾಗಿ ಸಂಚರಿಸುವ ಹಿನ್ನೆಲೆಯಲ್ಲಿ ಒಳಗೆ ಮಲಗಿರುವ ಪ್ರಯಾಣಿಕರಿಗೆ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ಅತ್ಯಾಧುನಿಕ ಸಸ್ಪೆನ್ಶನ್​ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

Exit mobile version