ಉತ್ತರ ಪ್ರದೇಶದ ಕಾನ್ಪುರದಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ನಡೆದ ಎನ್ನಲಾದ ವಂಚನೆ ಪ್ರಕರಣವೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ಕೇವಲ 45 ಲೀಟರ್ ಸಾಮರ್ಥ್ಯದ ಕಾರಿನ ಟ್ಯಾಂಕ್‌ಗೆ 52 ಲೀಟರ್ ಪೆಟ್ರೋಲ್ ತುಂಬಲಾಗಿದೆ ಎಂದು ಬಿಲ್ ನೀಡಿರುವ ಘಟನೆ ಗ್ರಾಹಕರನ್ನು ಬೆಚ್ಚಿಬೀಳಿಸಿದೆ.
ಹೊಸ ಕಾರು ಖರೀದಿಸಿದ್ದ ಚರಣ್ ಸಿಂಗ್ ಎಂಬುವವರು ತಮ್ಮ ವಾಹನದ ಟ್ಯಾಂಕ್ ಫುಲ್ ಮಾಡಲು ಬಂಕ್‌ಗೆ ತೆರಳಿದ್ದರು. ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಇನ್ನೂ ಸ್ವಲ್ಪ ಇಂಧನ ಉಳಿದಿರುವ ಸೂಚನೆ ಇದ್ದರೂ, ಪೆಟ್ರೋಲ್ ಹಾಕಿದ ಬಳಿಕ ನೀಡಿದ ಬಿಲ್‌ನಲ್ಲಿ 52 ಲೀಟರ್ ದಾಖಲಾಗಿರುವುದನ್ನು ಕಂಡು ಅವರು ಪ್ರಶ್ನೆ ಎತ್ತಿದರು.
ಸಂದೇಹ ಹೆಚ್ಚಾದ ಹಿನ್ನೆಲೆಯಲ್ಲಿ ಅವರು ಕಾರು ಖರೀದಿಸಿದ ಕಂಪನಿಯ ತಾಂತ್ರಿಕ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿಕೊಂಡರು. ಪರಿಶೀಲನೆ ನಡೆಸಿದ ಅಧಿಕಾರಿ, ಆ ಮಾದರಿಯ ವಾಹನದ ಟ್ಯಾಂಕ್ ಸಾಮರ್ಥ್ಯ 45 ಲೀಟರ್ ಮಾತ್ರವಾಗಿದ್ದು, ಅದಕ್ಕಿಂತ ಹೆಚ್ಚಿನ ಇಂಧನ ಸೇರುವುದು ಅಸಾಧ್ಯ ಎಂದು ಸ್ಪಷ್ಟಪಡಿಸಿದ್ದಾರೆ.
ಗ್ರಾಹಕರ ಆರೋಪದ ಪ್ರಕಾರ, ಮೊದಲಿಗೆ ಒಂದು ಪ್ರಮಾಣದ ಪೆಟ್ರೋಲ್ ತುಂಬಿಸಿದ ಬಳಿಕ ಯಂತ್ರದ ರೀಡಿಂಗ್‌ನಲ್ಲಿ ಬದಲಾವಣೆ ಮಾಡಿ ಹೆಚ್ಚುವರಿ ಪ್ರಮಾಣವನ್ನು ಬಿಲ್‌ನಲ್ಲಿ ತೋರಿಸಲಾಗಿದೆ. ಇದರಿಂದ ಯಂತ್ರದಲ್ಲಿ ತಾಂತ್ರಿಕ ತಿದ್ದುಪಡಿ ಅಥವಾ ಚಿಪ್ ದುರ್ಬಳಕೆ ನಡೆದಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ಘಟನೆ ಸಾರ್ವಜನಿಕರ ಗಮನ ಸೆಳೆದ ಬಳಿಕ ಜಿಲ್ಲಾಡಳಿತ ತಕ್ಷಣವೇ ಕ್ರಮ ಕೈಗೊಂಡಿದೆ. ಸಂಬಂಧಿತ ಯಂತ್ರಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಲಾಗಿದ್ದು, ಗ್ರಾಹಕರಿಗೆ ವಂಚನೆ ನಡೆದಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
