ಹಿಮಾಚಲದಲ್ಲಿ ಭೀಕರ ದುರಂತ: ಕಂದಕಕ್ಕೆ ಬಿದ್ದ ಕಾರು, 8 ಮಂದಿ ಸಾವು

ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಪ್ರವಾಸಿಗರಿದ್ದ ಕಾರು 500 ಮೀಟರ್ ಆಳದ ಕಂದಕಕ್ಕೆ ಉರುಳಿದ ಪರಿಣಾಮ ಎಂಟು ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಬೆಂಗಳೂರು ಮೂಲದ ಪ್ರವಾಸಿಗರು ಇರುವ ಶಂಕೆ ವ್ಯಕ್ತವಾಗಿದೆ.

ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ ಎಂಟು ಕುಟುಂಬಗಳ ಬದುಕನ್ನು ಕ್ಷಣಾರ್ಧದಲ್ಲಿ ಕತ್ತಲೆಗೆ ತಳ್ಳಿದೆ. ಪ್ರವಾಸಕ್ಕಾಗಿ ತೆರಳಿದ್ದ ಕಾರು ಆಳವಾದ ಕಂದಕಕ್ಕೆ ಉರುಳಿದ ಪರಿಣಾಮ ವಾಹನದಲ್ಲಿದ್ದ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚುರಾಹ್ ಉಪವಿಭಾಗದ ಬೈರಗಢ್–ಸಚ್ ಪಾಸ್–ಕಿಲ್ಲರ್ ರಸ್ತೆಯಲ್ಲಿ ಈ ದುರಂತ ಸಂಭವಿಸಿದೆ. ಹಿಮಾವೃತ ಪ್ರದೇಶಗಳನ್ನು ವೀಕ್ಷಿಸಲು ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಸುಮಾರು 500 ಮೀಟರ್ ಆಳದ ಕಂದಕಕ್ಕೆ ಬಿದ್ದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಬೆಂಗಳೂರು ಕುಟುಂಬಗಳ ಬಗ್ಗೆ ಶಂಕೆ

ಲಭ್ಯ ಮಾಹಿತಿಯ ಪ್ರಕಾರ, ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ ಒಂದು ಕುಟುಂಬ ಡಲ್‌ಹೌಸಿಯಲ್ಲಿ ತಂಗಿತ್ತು. ಬಳಿಕ ಮತ್ತೊಂದು ಪ್ರವಾಸಿ ಕುಟುಂಬದೊಂದಿಗೆ ವಾಹನ ಹಂಚಿಕೊಂಡು ಸಚ್ ಪಾಸ್ ಭಾಗದತ್ತ ಪ್ರಯಾಣ ಬೆಳೆಸಿತ್ತು. ವಾಹನದಲ್ಲಿ ಚಾಲಕ ಸೇರಿ ಒಟ್ಟು ಒಂಬತ್ತು ಮಂದಿ ಇದ್ದರೆಂದು ಹೇಳಲಾಗಿದ್ದು, ಅವರಲ್ಲಿ ಇಬ್ಬರು ಮಕ್ಕಳು ಕೂಡ ಸೇರಿದ್ದರು.

ಮೃತರ ಗುರುತು ಪತ್ತೆ ಕಾರ್ಯ ಮುಂದುವರಿದಿದ್ದು, ಮೃತಪಟ್ಟವರ ಪೈಕಿ ಬೆಂಗಳೂರು ಮೂಲದ ಪ್ರವಾಸಿಗರು ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. ಅಧಿಕೃತ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.

ರಕ್ಷಣಾ ಕಾರ್ಯಕ್ಕೆ ಸವಾಲು

ಅಪಘಾತ ಸಂಭವಿಸಿದ ಸ್ಥಳ ದುರ್ಗಮ ಪ್ರದೇಶವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆ ಉಂಟಾಯಿತು. ಕಡಿದಾದ ಇಳಿಜಾರು ಮತ್ತು ಕಲ್ಲುಬಂಡೆಗಳ ನಡುವೆಯೇ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಬೇಕಾಯಿತು.

ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ಪೊಲೀಸರು ಹಾಗೂ ಆಡಳಿತಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ನಿಖರ ಕಾರಣ ಪತ್ತೆಗಾಗಿ ತನಿಖೆ ಆರಂಭಿಸಲಾಗಿದೆ.

Exit mobile version