ಕೋವಿಡ್​ ಲಸಿಕೆಯಿಂದಲೇ ಹೃದಯಾಘಾತದ ಅಪಾಯ ಹೆಚ್ಚಳ : ಆರೋಪ ತಳ್ಳಿ ಹಾಕಿದ ಏಮ್ಸ್​ ಅಧ್ಯಯನ

Covid vaccine heart attack : ದೇಶದಾದ್ಯಂತ ಕೋವಿಡ್​ (Covid -19) ಸಾಂಕ್ರಾಮಿಕದ ಬಳಿಕ ಕಿರಿಯ ವಯಸ್ಸಿನವರಲ್ಲಿ ಹಠಾತ್​​ ಸಾವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 18 ರಿಂದ 45 ವರ್ಷ ಪ್ರಾಯದ ಪುರುಷರಲ್ಲಿ ಹೆಚ್ಚು ಮರಣ ಸಂಭವಿಸುತ್ತಿತ್ತು.

ಕೋವಿಡ್​ ಲಸಿಕೆಯಿಂದಾಗಿಯೇ ಈ ರೀತಿ ಕಿರಿಯ ವಯಸ್ಸಿನ ಪುರುಷರು ಮರಣವನ್ನುಪ್ಪುತ್ತಿದ್ದಾರೆ ಎಂಬ ಮಾತು ಪ್ರಬಲವಾಗಿ ಕೇಳಿ ಬರುತ್ತಿತ್ತು . ಆದರೆ ಇದೀಗ ಈ ವಿಚಾರವಾಗಿ ಏಮ್ಸ್​ ಆಸ್ಪತ್ರೆ ಸಂಶೋಧಕರು ನಡೆಸಿದ ಮಹತ್ವದ ಸಂಶೋಧನೆಯಲ್ಲಿ ಪ್ರಮುಖ ವಿಚಾರವೊಂದು ಹೊರಬಿದ್ದಿದೆ.

ಕಳೆದ 1 ವರ್ಷಗಳಲ್ಲಿ ಈ ರೀತಿ ಹಠಾತ್​ ಸಾವಿಗೆ ಒಳಗಾದ ಅನೇಕ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸುವ ಮೂಲಕ ಈ ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನದಲ್ಲಿ ಯುವಕರ ಹಠಾತ್​ ಸಾವಿಗೆ ಕೋವಿಡ್​ ಲಸಿಕೆ ಕಾರಣವಲ್ಲ.

ಬದಲಾಗಿ ಹೃದಯ ರಕ್ತನಾಳದಲ್ಲಿ ಇರುವ ವೈದ್ಯಕೀಯ ಸಮಸ್ಯೆಯೇ ಇದಕ್ಕೆ ಕಾರಣ ಎಂಬ ವಿಚಾರ ಬಯಲಾಗಿದೆ. ಸರಿಸುಮಾರು 2,214 ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ 180 ಹಠಾತ್​ ಸಾವಿನಿಂದ ಮೃತಪಟ್ಟವರಾಗಿದ್ದರು.

ಇದರಲ್ಲಿ 57 ಪರ್ಸೆಂಟ್​ ಜನರು ಯುವಕರಾಗಿದ್ದರೆ 42 ಪ್ರತಿಶತ ಜನರು ವಯಸ್ಕರಾಗಿದ್ದರು. ಇವರೆಲ್ಲರಿಗೂ ಹೃದಯ ಸಂಬಂಧಿ ಸಮಸ್ಯೆ ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಪರಿಧಮಿನಿ ಕಾಯಿಲೆಗೆ ಒಳಗಾಗಿದ್ದ ಹಿನ್ನೆಲೆಯಲ್ಲಿ ಇವರೆಲ್ಲ ಹಠಾತ್​ ಸಾವಿಗೆ ಒಳಗಾಗಿದ್ದರು.

ಕೋವಿಡ್​ ಲಸಿಕೆಯಿಂದ ಇವರ ದೇಹದಲ್ಲಿ ಯಾವುದೇ ನ್ಯೂನ್ಯತೆ ಕಂಡು ಬಂದಿರಲಿಲ್ಲ ಎಂದು ಈ ಅಧ್ಯಯನ ತಿಳಿಸಿದೆ. ಕೋವಿಡ್​ ಸಂದರ್ಭದಲ್ಲಿ ದೇಶದಲ್ಲಿ ಮರಣ ಮೃದಂಗವೇ ಸಂಭವಿಸುತ್ತಿದ್ದ ಸಂದರ್ಭದಲ್ಲಿ ಕೋವಿಡ್​ ಲಸಿಕೆಗಳು ಸಂಜೀವಿನಿಯಂತೆ ಕಾರ್ಯನಿರ್ವಹಿಸಿದ್ದವು.

ಭಾರತದಲ್ಲಿ ತಯಾರಾದ ಲಸಿಕೆಗಳನ್ನು ವಿದೇಶಗಳಿಗೂ ಕಳುಹಿಸಿಕೊಡಲಾಗಿತ್ತು. ಆದರೆ ಕೆಲವು ವರ್ಷಗಳ ಬಳಿಕ ಕೋವಿಡ್​ ಲಸಿಕೆಯಿಂದ ಕಿರಿಯ ಪ್ರಾಯದ ಪುರುಷರಲ್ಲಿ ಹೃದಯಾಘಾತದ ಅಪಾಯ ಹೆಚ್ಚುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬಂದಿದ್ದವು.

ಇದೀಗ ಏಮ್ಸ್​ ತಜ್ಞರ ನೇತೃತ್ವದಲ್ಲಿ ನಡೆಸಲಾದ ಈ ಅಧ್ಯಯನದಲ್ಲಿ ಸತ್ಯಾಂಶ ಹೊರಬಿದ್ದಿದ್ದು ಕೋವಿಡ್​ ಲಸಿಕೆಗಳು ಆರೋಪಮುಕ್ತವಾದಂತಾಗಿದೆ.

AIIMS study refutes claims that Covid vaccine increases risk of heart attack Kannada News

Exit mobile version