ರಾಜ್ಯದ ಸರ್ಕಾರಿ ಶಾಲೆಗಳ ಹಾಜರಾತಿಗೆ ಹೈಟೆಕ್​ ಸ್ಪರ್ಶ : ಚಹರೆ ಗುರುತಿನ ಹಾಜರಾತಿ ಶೀಘ್ರದಲ್ಲೇ ಜಾರಿ

ರಾಜ್ಯದಲ್ಲಿ ಶೈಕ್ಷಣಿಕ ಮಟ್ಟ ಸುಧಾರಣೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಹಾಜರಾತಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶೀಘ್ರದಲ್ಲೇ ಚಹರೆ ಗುರುತಿನ ಹಾಜರಾತಿ ವ್ಯವಸ್ಥೆ ಜಾರಿಗೆ ತರುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಕಲಬುರಗಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಫೇಸ್​ ರಿಕಗ್ನೈಸೇಷನ್​ ಹೊಸ ಹಾಜರಾತಿ ವ್ಯವಸ್ಥೆ ಆರಂಭಿಸುತ್ತಿದ್ದೇವೆ. ಈ ಹೊಸ ಹಾಜರಾತಿ ಪದ್ಧತಿಯಿಂದ ರಾಜ್ಯದಲ್ಲಿನ ಶೈಕ್ಷಣಿಕ ದಿಕ್ಕೆ ಬದಲಾಗಲಿದೆ. ಸರ್ಕಾರಿ ಶಾಲೆಗಳು ಇನ್ಮುಂದೆ ಹೈಟೆಕ್​ ಸ್ಪರ್ಶ ಪಡೆದುಕೊಳ್ಳಲಿವೆ. ತಂತ್ರಜ್ಞಾನವನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳುವುದರಿಂದ ಮಾತ್ರ ಶೈಕ್ಷಣಿಕ ಪ್ರಗತಿ ಸಾಧ್ಯ ಎಂದು ಮಧು ಬಂಗಾರಪ್ಪ ಅಭಿಪ್ರಾಯ ಪಟ್ಟಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಪ್ರಸ್ತುತ ವಿದ್ಯಾರ್ಥಿಗಳ ಹೆಸರನ್ನು ಕೂಗಿ ಹಾಜರಾತಿ ದಾಖಲು ಮಾಡಿಕೊಳ್ಳಲಾಗುತ್ತಿದೆ. ಶಿಕ್ಷಕರು ಸಹಿ ಹಾಕುವ ಮೂಲಕ ಹಾಜರಾತಿ ಹಾಕುತ್ತಿದ್ದಾರೆ. ಇದು ಎರಡೂ ಹಳೆಯ ವಿಧಾನಗಳಿಗೆ ಬ್ರೇಕ್​ ಹಾಕಿ ಹಾಜರಾತಿ ಪ್ರಕ್ರಿಯೆಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಹೈಟೆಕ್​ ಸ್ಪರ್ಶ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಇದಕ್ಕಾಗಿ ಸೂಕ್ತ ತಯಾರಿ ಈಗಾಗಲೇ ಆರಂಭಿಸಿದ್ದೇವೆ ಎಂದು ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.

Exit mobile version