ಮುಲ್ಕಿ ಕಂಬಳದಲ್ಲಿ ಬಹುಮಾನ ಗೆದ್ದ ಅನ್ಯಧರ್ಮೀಯನ ಬಳಿ ಹಫ್ತಾ ವಸೂಲಿಗೆ ಮುಂದಾದವರ ಬಂಧನ

ಕಂಬಳದಲ್ಲಿ ಬಹುಮಾನ ಗೆದ್ದ ಕೋಣದ ಮಾಲೀಕನೊಂದಿಗೆ ಹಣಕ್ಕಾಗಿ ಪೀಡಿಸಿ ಹಲ್ಲೆ ನಡೆಸಿದ ಘಟನೆಯು ದಕ್ಷಿಣ ಕನ್ನಡ ಜಿಲ್ಲೆ ಮುಲ್ಕಿ ತಾಲೂಕಿನ ಅಂಗಾರಗುಡ್ಡೆ ಎಂಬಲ್ಲಿ ನಡೆದಿದೆ. ಕೋಣದ ಮಾಲೀಕನ ಬಳಿ ಹಫ್ತಾ ವಸೂಲಿಗೆ ಮುಂದಾದ ಆರೋಪಿಗಳನ್ನು ಮುಲ್ಕಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಶ್ಯಾಮ ಸುಂದರ ಶೆಟ್ಟಿ, ಅಕ್ಷಯ ಪೂಜಾರಿ ಹಾಗೂ ಸುವೀನ್​ ಕಾಂಚನ್​ ಎಂದು ಗುರುತಿಸಲಾಗಿದೆ.
ಕೆಂಚಕನಕೆರೆ ನಿವಾಸಿಯಾಗಿರುವ ಶಂಸುದ್ದೀನ್​ ಮುಂಬೈನಲ್ಲಿ ನೆಲೆಸಿರುವ ಉದ್ಯಮಿಯೊಬ್ಬರಿಗೆ ಸೇರಿದ ಗದ್ದೆ, ತೋಟ ಹಾಗೂ ಮನೆಯನ್ನು ನೋಡಿಕೊಳ್ಳುತ್ತಿದ್ದರು. ಮುಲ್ಕಿಯ ಅರಸು ಕಂಬಳದಲ್ಲಿ ಶಂಸುದ್ದೀನ್​ ತಂದಿದ್ದ ಕೋಣಗಳಿಗೆ ಬಹುಮಾನ ದೊರಕಿತ್ತು. ಈ ಹಿನ್ನೆಲೆಯಲ್ಲಿ ಶಂಸುದ್ದೀನ್​ ಮನೆಗೆ ನುಗ್ಗಿದ ಆರೋಪಿಗಳು ಕಂಬಳದಲ್ಲಿ ಬಹುಮಾನ ರೂಪದಲ್ಲಿ ದೊರೆತ ಬಂಗಾರದ ಜೊತೆ ಹಣ ಕೊಡಬೇಕು ಎಂದು ಶಂಸುದ್ದೀನ್​ಗೆ ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: ಹೊಸ ವರ್ಷದ ಆಚರಣೆಗೆ ಪ್ರೇಮಿಯನ್ನು ಕರೆದು ಖಾಸಗಿ ಭಾಗ ಕತ್ತರಿಸಿದ ಮಹಿಳೆ!

ದನ ಕಡಿಯೋಕೆ ಕೊಡ್ತಿಯಲ್ವಾ ಎಂದು ಬೆದರಿಸಿ ಶಂಸುದ್ದೀನ್​ ಬಳಿಯಲ್ಲಿ ಮೂವರು ಆರೋಪಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಶಂಸುದ್ದೀನ್​ ಮೇಲೆ ಹಲ್ಲೆಯನ್ನೂ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸ್ಥಳೀಯ ನಿವಾಸಿಗಳು ಆರೋಪಿಗಳನ್ನು ತಡೆದಿದ್ದಾರೆ. ಈ ಸಂಬಂಧ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ಆರಂಭಿಸಿದ್ದಾರೆ.

Exit mobile version