ಕತ್ತು ಸೀಳಿದ ಗಾಳಿಪಟದ ದಾರ : ಹಬ್ಬಕ್ಕೆ ಮಗಳನ್ನು ಕರೆತರಲು ಹೊರಟಿದ್ದ ತಂದೆ ಮೃತ್ಯು

ಗಾಳಿಪಟ ಹಾರಿಸುತ್ತಿದ್ದ ಮಾಂಜಾ ದಾರ ಕತ್ತು ಸೀಳಿದ ಪರಿಣಾಮ ಬೈಕ್​ನಲ್ಲಿ ಸಾಗುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ ದಾರುಣ ಘಟನೆಯು ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದ ಸೇತುವೆ ಬಳಿ ಸಂಭವಿಸಿದೆ. ನಡೆದಿದ್ದು, ಮೃತ ವ್ಯಕ್ತಿಯನ್ನು ಚಿಟಗುಪ್ಪ ತಾಲೂಕಿನ ಬಂಬುಳಗಿ ಗ್ರಾಮದ 48 ವರ್ಷದ ಸಜೀವ್​ ಕುಮಾರ್​ ಹೊಸಮನಿ ಎಂದು ಗುರುತಿಸಲಾಗಿದೆ.

ಹುಮನಾಬಾದ್‌ ಪಟ್ಟಣದ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗಳನ್ನು ಮನೆಗೆ ಕರೆದುಕೊಂಡು ಬರಲು ಸಜೀವ್​ ಕುಮಾರ್​ ಬೈಕ್​ನಲ್ಲಿ ತೆರಳುತ್ತಿದ್ದ ಎನ್ನಲಾಗಿದೆ. ಈ ವೇಳೆ ಮಾಂಜಾ ದಾರ ಅವರ ಕುತ್ತಿಗೆ ಸೀಳಿದೆ. ನಿಯಂತ್ರಣ ತಪ್ಪಿ ಬೈಕ್​ನಿಂದ ಬಿದ್ದ ಸಜೀವ್​ ಕುಮಾರ್​ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.

ಇದನ್ನೂ ಓದಿ: ಶಬರಿಮಲೆ ಯಾತ್ರೆಯಿಂದ ವಾಪಸ್ಸಾದ ದಿನವೇ ಪತ್ನಿಯನ್ನು ಕೊಂದ ಪಾಪಿ ಪತಿ

ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಜೀವ್​ ಕುಮಾರ್​ ಆ ನೋವಿನ ನಡುವೆಯೂ ಮಗಳಿಗೆ ಕರೆ ಮಾಡಿದ್ದರು ಎನ್ನಲಾಗಿದೆ. ಕೂಡಲೇ ಸ್ಥಳಕ್ಕೆ ಜಮಾಯಿಸಿದ ಸ್ಥಳೀಯರು ಕುತ್ತಿಗೆಗೆ ಮೇಲೆ ಬಟ್ಟೆ ಇಟ್ಟು ರಕ್ತಸ್ರಾವ ನಿಲ್ಲಿಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಆ್ಯಂಬುಲೆನ್ಸ್​ ಸರಿಯಾದ ಸಮಯಕ್ಕೆ ಬಂದಿದ್ದರೆ ಸಜೀವ್​ ಕುಮಾರ್​ ಪ್ರಾಣ ಉಳಿಯುತ್ತಿತ್ತು ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಮನ್ನಾ ಎಖೆಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version