ಚಿಕ್ಕಮಗಳೂರು : ವಾಣಿಜ್ಯ ಸಿಲಿಂಡರ್​ ಸಿಗದ್ದಕ್ಕೆ ಕ್ಯಾಂಟೀನ್​ನಲ್ಲಿ ಗೃಹೋಪಯೋಗಿ ಸಿಲಿಂಡರ್​ ಬಳಕೆ : ಭಾರೀ ಸ್ಫೋಟ

ವಾಣಿಜ್ಯ ಸಿಲಿಂಡರ್​ ಲಭ್ಯವಾಗದ ಕಾರಣ ಚಿಕ್ಕಮಗಳೂರಿನ ಹೋಟೆಲ್​ ಒಂದರಲ್ಲಿ ಗೃಹಬಳಕೆಯ ಸಿಲಿಂಡರ್​ ಬಳಸಿದ ಪರಿಣಾಮ ದೊಡ್ಡ ಅನಾಹುತವೇ ನಡೆದು ಹೋಗಿದೆ

ಚಿಕ್ಕಮಗಳೂರು : ಕೊಲ್ಲಿ ರಾಷ್ಟ್ರಗಳ ಯುದ್ಧದಿಂದಾಗಿ ದೇಶದಲ್ಲಿ ಉಂಟಾಗಿರುವ ವಾಣಿಜ್ಯ ಸಿಲಿಂಡರ್​ಗಳ ಅಭಾವ ಸದ್ಯ ಚರ್ಚೆಯ ವಿಷಯವಾಗಿದೆ. ಒಂದು ಕಡೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಿಲಿಂಡರ್​ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ ಎನ್ನುತ್ತಿವೆ. ಮತ್ತೊಂದು ಕಡೆ ಸಿಲಿಂಡರ್​ಗೆ ಹಾಹಾಕಾರ ಶುರುವಾಗಿದೆ. ವಾಣಿಜ್ಯ ಸಿಲಿಂಡರ್​ ಲಭ್ಯವಾಗದ ಕಾರಣ ಚಿಕ್ಕಮಗಳೂರಿನ ಹೋಟೆಲ್​ ಒಂದರಲ್ಲಿ ಗೃಹಬಳಕೆಯ ಸಿಲಿಂಡರ್​ ಬಳಸಿದ ಪರಿಣಾಮ ದೊಡ್ಡ ಅನಾಹುತವೇ ನಡೆದು ಹೋಗಿದೆ.
ಹೌದು..! ಚಿಕ್ಕಮಗಳೂರು ನಗರದ ಶಾಂತಿನಗರ ಮುಖ್ಯರಸ್ತೆಯಲ್ಲಿ ಇಂತಹದ್ದೊಂದು ಅನಾಹುತ ಸಂಭವಿಸಿದೆ. ಸುರೇಶ್​ ಕ್ಯಾಂಟೀನ್​ ಎಂಬಲ್ಲಿ ಗೃಹಬಳಕೆಯ ಸಿಲಿಂಡರ್​ ಬಳಕೆ ಮಾಡಲಾಗಿತ್ತು. ಆದರೆ ಸಿಲಿಂಡರ್​ ಸೋರಿಕೆಯಾಗಿದ್ದು ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಇದರಿಂದ ಹೋಟೆಲ್​ ಮಾಲೀಕರಾದ ಸುರೇಶ್​ ಅವರ ಪತ್ನಿ ವೇಲಿ ಎಂಬವರ ದೇಹ, ಕೈ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ.

ಇದನ್ನೂ ಓದಿ: ಕುಂದಾಪುರ : ಸ್ನಾನಕ್ಕೆ ತೆರಳುತ್ತಿದ್ದ 25 ವರ್ಷದ ಯುವಕ ಹಠಾತ್ ಕುಸಿದು ಬಿದ್ದು ಸಾವು

 

ಗಾಯಗೊಂಡಿರುವ ವೇಲಿ ಅವರನ್ನು ಚಿಕ್ಕಮಗಳೂರು ನಗರದಲ್ಲೇ ಇರುವ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೂಡಲೇ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು ಬೆಂಕಿನಂದಿಸಲು ಹರಸಾಹಸ ಪಟ್ಟಿದ್ದಾರೆ. ಕಮರ್ಷಿಯಲ್​ ಗ್ಯಾಸ್​ ಸಿಲಿಂಡರ್​ ಸಕಾಲಕ್ಕೆ ದೊರೆಯದ ಹಿನ್ನೆಲೆಯಲ್ಲಿ ಹೋಟೆಲ್​ನಲ್ಲಿ ಗೃಹೋಪಯೋಗಿ ಸಿಲಿಂಡರ್​ ಬಳಕೆ ಮಾಡಿ ಮಾಲೀಕ ಸುರೇಶ್ ಕ್ಯಾಂಟೀನ್​ ನಡೆಸುತ್ತಿದ್ದರು ಎನ್ನಲಾಗಿದೆ. ಚಿಕ್ಕಮಗಳೂರು ನಗರದ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಅವಘಢ ಸಂಭವಿಸಿದ್ದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಭಾರತದ ಸರ್ಕಾರದ ಎಲ್​ಪಿಜಿ (ಪೂರೈಕೆ ಮತ್ತು ವಿತರಣೆ ನಿಯಂತ್ರಣ) ಆದೇಶ 2020ರ ಅಡಿಯಲ್ಲಿ ವಾಣಿಜ್ಯ ಉದ್ದೇಶಕ್ಕೆ ಗೃಹೋಪಯೋಗಿ ಸಿಲಿಂಡರ್​ಗಳ ಬಳಕೆ ಅಪರಾಧ ಎಂದು ಪರಿಗಣಿಸಲಾಗಿದೆ. ಹೀಗಾಗಿ ಕ್ಯಾಂಟೀನ್​ ಮಾಲೀಕ ಸುರೇಶ್​ಗೆ ಇದರಿಂದ ಕಾನೂನು ಕ್ರಮ ಎದುರಿಸಬೇಕಾಗಿ ಬರಲಿದೆ.

Exit mobile version