ಉಡುಪಿ: ನೌಕಾಸೇನೆ ರಹಸ್ಯ ಮಾಹಿತಿ ಸೋರಿಕೆ ಪ್ರಕರಣ – ಮತ್ತೋರ್ವ ಆರೋಪಿ ಬಂಧನ

ಉಡುಪಿ: ಮಲ್ಪೆ ಕೊಚ್ಚಿನ್ ಶಿಪ್‌ಯಾರ್ಡ್‌ನ ನೌಕರರು ಭಾರತದ ನೌಕಾಸೇನೆಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳುಹಿಸಿ ಅಕ್ರಮ ಲಾಭ ಪಡೆದ ಪ್ರಕರಣದಲ್ಲಿ ಉಡುಪಿ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಗುಜರಾತಿನ ಆನಂದ ತಾಲ್ಲೂಕಿನ ಕೈಲಾಸ್ ನಗರಿ ನಿವಾಸಿ ಹೀರೇಂದ್ರ ಕುಮಾರ್ (34) ಬಂಧಿತ ಆರೋಪಿ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಮೂರಕ್ಕೆ ಏರಿದೆ. ಈ ಹಿಂದೆ ನ.21ರಂದು ಉತ್ತರ ಪ್ರದೇಶದ ರೋಹಿತ್ ಹಾಗೂ ಸಂತ್ರಿಯನ್ನು ಬಂಧಿಸಲಾಗಿತ್ತು. ಮೂವರು ಆರೋಪಿಗಳೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇದನ್ನೂ ಓದಿ: ಕೊಲ್ಲೂರು ದೇಗುಲದಲ್ಲಿ ಆನುವಂಶಿಕವಲ್ಲದ ಅರ್ಚಕರಿಗೆ ಹೋಮ ನಡೆಸಲು ಅವಕಾಶ : ಕೋರ್ಟ್ ಮೇಟ್ಟಿಲೇರಿದ ತಂತ್ರಿಗಳು

ರೋಹಿತ್ ಮತ್ತು ಸಂತ್ರಿ ಶಿಪ್‌ಯಾರ್ಡ್‌ನ ಸಹಗುತ್ತಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ನೌಕಾಸೇನೆಗೆ ಸಂಬಂಧಿಸಿದ ಹಡಗುಗಳ ಸಂಖ್ಯಾಪಟ್ಟಿ ಸೇರಿದಂತೆ ಗೌಪ್ಯ ಮಾಹಿತಿಯನ್ನು ವಾಟ್ಸಾಪ್ ಮೂಲಕ ಪಾಕಿಸ್ತಾನಕ್ಕೆ ಕಳುಹಿಸಿದ್ದ ಆರೋಪ ಎದುರಿಸುತ್ತಿದ್ದಾರೆ.

ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಹರ್ಷ ಪ್ರಿಯಂವದಾ ನೇತೃತ್ವದ ತನಿಖಾ ತಂಡ, ಆರೋಪಿಗಳಿಗೆ ಸಿಮ್ ಕಾರ್ಡ್ ಒದಗಿಸಿದ್ದ ಆರೋಪದ ಮೇರೆಗೆ ಹೀರೇಂದ್ರ ಕುಮಾರ್‌ನನ್ನು ಡಿ.21ರಂದು ಬಂಧಿಸಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ

Exit mobile version