ಶಬರಿಮಲೆ ಯಾತ್ರೆಯಿಂದ ವಾಪಸ್ಸಾದ ದಿನವೇ ಪತ್ನಿಯನ್ನು ಕೊಂದ ಪಾಪಿ ಪತಿ

ಹಾಸನ: ಶಬರಿಮಲೆ ಯಾತ್ರೆ ಮುಗಿಸಿ ಬಂದ ದಿನವೇ ಪತ್ನಿಯನ್ನು ಪತಿ ಬರ್ಬರವಾಗಿ ಹತ್ಯೆಗೈದ ದಾರುಣ ಘಟನೆಯು ಹಾಸನ ಜಿಲ್ಲೆ ಆಲೂರು ತಾಲೂಕಿನ ಯಡೂರು ಗ್ರಾಮದಲ್ಲಿ ಸಂಭವಿಸಿದೆ. ಜನವರಿ 10ರಂದು ಈ ಘಟನೆ ಸಂಭವಿಸಿದ್ದು ಪತ್ನಿ 40 ವರ್ಷದ ರಾಧಾಳನ್ನು ಕೊಂದು ಯಗಚಿ ನದಿಗೆ ಎಸೆದಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಎರಡನೇ ಮದುವೆಯಾಗಿರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ರಾಧಾ ಪತಿ ಕುಮಾರ್​ ಈ ಕೃತ್ಯ ಎಸಗಿದ್ದಾನೆ ಎನ್ನುವುದು ರಾಧಾ ಕುಟುಂಬಸ್ಥರ ಆರೋಪವಾಗಿದೆ. ಕುಮಾರ್​ಗೆ ಈ ಕೃತ್ಯ ಎಸಗಲು ಆತನ ಕುಟುಂಬಸ್ಥರೂ ಸಾಥ್​ ನೀಡಿದ್ದಾರೆ ಎಂದು ರಾಧಾ ಮನೆಯವರು ಆರೋಪ ಮಾಡಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ರಾಧಾ ಪತಿಯನ್ನು ಬಿಟ್ಟು ಬೇರೆ ಮನೆಯಲ್ಲಿ ವಾಸವಿದ್ದರು. ಜನವರಿ ಮೊದಲ ವಾರದಲ್ಲಿ ಕುಮಾರ್​ ಶಬರಿಮಲೆಗೆ ತೆರಳಿದ್ದ ಎನ್ನಲಾಗಿದೆ. ಇರುಮುಡಿ ಕಟ್ಟುವ ಸಂದರ್ಭದಲ್ಲಿ ಪತ್ನಿ ಸ್ಥಾನದಲ್ಲಿ ರಾಧಾ ಮಾಡಬೇಕಿದ್ದ ಪೂಜೆಯನ್ನು ಬೇರೊಬ್ಬ ಮಹಿಳೆ ಮಾಡಿರುವ ಬಗ್ಗೆ ರಾಧಾಗೆ ಮಾಹಿತಿ ದೊರಕಿತ್ತು .
ಇದನ್ನೇ ಪ್ರಶ್ನೆ ಮಾಡಲೆಂದು ರಾಧಾ ರಾತ್ರಿ ಯಡೂರಿಗೆ ಆಗಮಿಸಿದ್ದಳು ಎನ್ನಲಾಗಿದೆ. ಅದೇ ದಿನದ ಶಬರಿಮಲೆಯಿಂದ ವಾಪಸ್ಸಾಗಿದ್ದ ಕುಮಾರ್ ರಾಧಾಳನ್ನು ಕೊಂದು​ ಹಾಸನ ತಾಲೂಕಿನ ಕಂದಲಿ ಬಳಿಯ ಯಗಚಿ ನದಿಯಲ್ಲಿ ಆಕೆಯ ಶವವನ್ನು ಎಸೆದಿದ್ದ.

ಇದನ್ನೂ ಓದಿ: ಸಕಲೇಶಪುರ : ಆನೆ ದಾಳಿ; ಕೂಲಿ ಕಾರ್ಮಿಕ ಮಹಿಳೆ ಸಾವು

ಈ ಬಗ್ಗೆ ನಿನ್ನೆ ತಾನೇ ಪೊಲೀಸರಿಗೆ ಕುಮಾರ್​ ಮಾಹಿತಿ ನೀಡಿದ್ದ. ಈ ಹಿನ್ನೆಲೆಯಲ್ಲಿ ಇಂದು ಯಗಚಿ ನದಿಯಿಂದ ರಾಧಾಳ ಮೃತದೇಹವನ್ನು ಪೊಲೀಸರು ಹೊರತೆಗೆದಿದ್ದಾರೆ. ರಾಧಾಳ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಆಲೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Exit mobile version