ಮನೆಗೆಲಸದ ಸೋಗಿನಲ್ಲಿ ಬಂದು 18 ಕೋಟಿ ರೂಪಾಯಿ ಮೌಲ್ಯದ ಸ್ವತ್ತು ಎಗರಿಸಿದ ಖದೀಮ ದಂಪತಿ

ಬೆಂಗಳೂರು: ಬಿಲ್ಡರ್​ ಒಬ್ಬರ ನಿವಾಸದಲ್ಲಿ ಮನೆಕೆಲಸದವರಾಗಿ ಕೆಲಸ ಮಾಡುತ್ತಿದ್ದ ದಂಪತಿ ಬರೋಬ್ಬರಿ 18 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳುವು ಮಾಡಿ ಪರಿಹಾರಿಯಾಗುವ ಘಟನೆಯು ರಾಜ್ಯ ರಾಜಧಾನಿ ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ನಡೆದಿದೆ. ಯಮಲೂರಿನಲ್ಲಿರುವ ಬಿಲ್ಡರ್​ ಶಿವಕುಮಾರ್​ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ದಿನೇಶ ಹಾಗೂ ಕಮಲಾ ಕೇವಲ 20 ದಿನಗಳ ಹಿಂದೆ ಇಲ್ಲಿ ಕೆಲಸಕ್ಕೆ ಸೇರಿದ್ದರು ಎನ್ನಲಾಗಿದೆ. ವಿಕಾಸ್​ ಹಾಗೂ ವಿಷ್ಣು ಎಂಬ ಮಧ್ಯವರ್ತಿಗಳ ಸಹಾಯದಿಂದ ಅವರಿಗೆ ಇಲ್ಲಿ ಕೆಲಸ ದೊರಕಿತ್ತು. ಮನೆಯಲ್ಲಿ ಯಾರೂ ಇಲ್ಲದ ವೇಳೆ ತಮ್ಮ ಚಾಲಾಕಿತನ ತೋರಿದ ಖದೀಮರು 18 ಕೋಟಿ ರೂಪಾಯಿ ಮೌಲ್ಯದ ಸ್ವತ್ತು ಕದ್ದು ಪರಾರಿಯಾಗಿದ್ದರು. ಜನವರಿ 25ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.

ಆರೋಪಿಗಳು ನೆಲಮಹಡಿ ಹಾಗೂ ಮೊದಲನೇ ಮಹಡಿಯಲ್ಲಿರುವ ಮಲಗುವ ಕೋಣೆಗಳಲ್ಲಿ ಇದ್ದ ಲಾಕರ್​ಗಳನ್ನು ಕಬ್ಬಿಣದ ರಾಡ್​ನಿಂದ ಒಡೆದಿದ್ದಾರೆ. ಇದರಲ್ಲಿದ್ದ 11.5 ಕೆಜಿ ಮೌಲ್ಯದ ಚಿನ್ನ, 5 ಕೆ.ಜಿ ಬೆಳ್ಳಿ ಹಾಗೂ 11.5 ಲಕ್ಷ ರೂಪಾಯಿ ನಗದು ದೋಚಿದ್ದಾರೆ. ಕದ್ದ ಎಲ್ಲಾ ವಸ್ತುಗಳ ಒಟ್ಟೂ ಮೌಲ್ಯ ಸುಮಾರು 18 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಮನೆಯ ಲಾಕರ್​ ಮುರಿದು ಹೋಗಿರುವುದನ್ನು ಗಮನಿಸಿದ ಮನೆಯ ಇತರೆ ಸಿಬ್ಬಂದಿ ಕುಟುಂಬ ಸದಸ್ಯರಿಗೆ ಕರೆ ಮಾಡಿ ಮಾಹಿತಿ ನೀಡಿದಾಗ ಕಳ್ಳತನ ನಡೆದಿರುವುದು ತಿಳಿದುಬಂದಿದೆ. ಈ ಸಂಬಂಧ ಕುಟುಂಬಸ್ಥರು ಮಾರತ್ತಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಘಟನೆ ಬಳಿಕ ಮನೆ ಕೆಲಸ ಮಾಡುತ್ತಿದ್ದ ದಂಪತಿ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಅಲ್ಲದೇ ಅವರ ಮೊಬೈಲ್​ ಫೋನ್​ಗಳೂ ಸ್ವಿಚ್​ಆಫ್​ ಆಗಿದ್ದವು. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ . ಅಲ್ಲದೇ ಆರೋಪಿಗಳಿಗೆ ಬೇರೆ ಯಾವುದೇ ಗ್ಯಾಂಗ್​ಗಳ ಜೊತೆ ಸಂಪರ್ಕ ಇದೆಯೇ ? ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: 2ನೇ ಮದುವೆಯಾದ ತಾಯಿ; ಮಗನಿಂದಲೇ ಭೀಕರ ಹಲ್ಲೆ: ಚಾಕುವಿನಿಂದ ಇರಿದು ಪರಾರಿ

ಸಮೀಪದ ರಸ್ತೆಗಳು, ರೈಲ್ವೆ ನಿಲ್ದಾಣ ಹಾಗೂ ಬಸ್​ ಟರ್ಮಿನಲ್​ಗಳಲ್ಲಿರುವ ಸಿ.ಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಕಲೆ ಹಾಕಲಾಗಿದ್ದು ಆರೋಪಿಗಳ ಚಲನವಲನ ವೀಕ್ಷಣೆಗೆಂದೇ ತಂಡ ರಚನೆ ಮಾಡಲಾಗಿದೆ. ಅಲ್ಲದೇ ಈ ದಂಪತಿಗೆ ಉದ್ಯೋಗ ಮಾಡಿಸಿಕೊಂಡ ಮಧ್ಯವರ್ತಿಗಳನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.

Exit mobile version