ಬ್ಯಾನರ್​ ಕಟ್ಟು ವಿಚಾರಕ್ಕೆ ಜಟಾಪಟಿ : ಗಾಲಿ ಜನಾರ್ದನ ರೆಡ್ಡಿ ನಿವಾಸದ ಎದುರು ಗುಂಡೇಟಿಗೆ ಕಾಂಗ್ರೆಸ್​ ಕಾರ್ಯಕರ್ತ ಬಲಿ

ಬ್ಯಾನರ್​ ಕಟ್ಟುವ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್​ ಕಾರ್ಯಕರ್ತರ ನಡುವೆ ನಡೆದ ಗಲಾಟೆಯು ವಿಕೋಪಕ್ಕೆ ತಿರುಗಿದ ಪರಿಣಾಮ ಓರ್ವ ಕಾಂಗ್ರೆಸ್​ ಕಾರ್ಯಕರ್ತ ಸಾವನ್ನಪ್ಪಿದ ಆಘಾತಕಾರಿ ಘಟನೆಯು ಬಳ್ಳಾರಿಯಲ್ಲಿರುವ ಶಾಸಕ ಗಾಲಿ ಜನಾರ್ದನ ರೆಡ್ಡಿ ನಿವಾಸದ ಎದುರಲ್ಲೇ ಸಂಭವಿಸಿದೆ.
ನಾಳೆ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ಬಳ್ಳಾರಿಯಾದ್ಯಂತ ಬ್ಯಾನರ್​ ಅಂಟಿಸುವ ಕಾರ್ಯ ನಡೆಯುತ್ತಿತ್ತು. ಆದರೆ ಅವಂಬಾವಿಯಲ್ಲಿರುವ ಗಾಲಿ ಜನಾರ್ದನ ರೆಡ್ಡಿ ನಿವಾಸದ ಎದುರು ಬ್ಯಾನರ್​ ಅಳವಡಿಕೆಗೆ ಅವರ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಶಾಸಕ ಭರತ್​ ರೆಡ್ಡಿ ಹಾಗೂ ಶಾಸಕ ಗಾಲಿ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಭಾರೀ ಸಂಘರ್ಷ ಏರ್ಪಟ್ಟಿತ್ತು. ಈ ಸಂದರ್ಭದಲ್ಲಿ ಫೈರಿಂಗ್​ ನಡೆದಿದ್ದು ಕಾಂಗ್ರೆಸ್​ ಕಾರ್ಯಕರ್ತರ ರಾಜಶೇಖರ್​ ಎಂಬವರು ಬಲಿಯಾಗಿದ್ದಾರೆ.

ಶಾಸಕ ಭರತ್​ ರೆಡ್ಡಿ ಬೆಂಬಲಿಗರು ಬ್ಯಾನರ್​ ಕಟ್ಟುವುದನ್ನು ಜನಾರ್ದನ ರೆಡ್ಡಿ ಬೆಂಬಲಿಗರು ವಿರೋಧಿಸಿದ್ದರು. ಬ್ಯಾನರ್​ಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಲಾಗುತ್ತಿತ್ತು. ಸ್ಥಳಕ್ಕೆ ಶ್ರೀರಾಮುಲು ಕೂಡ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸುತ್ತಿದ್ದರು. ಈ ಹೊತ್ತಿಗಾಗಲೇ ಭರತ್​ ರೆಡ್ಡಿ ಆಪ್ತ ಸತೀಶ್​ ರೆಡ್ಡಿ ಖಾಸಗಿ ಗನ್​ಮ್ಯಾನ್​ಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಎರಡೂ ಕಡೆಯವರು ಪರಸ್ಪರ ಕಲ್ಲು ತೂರಾಟ ಆರಂಭಿಸಿದ್ದರು. ಭರತ್​ ರೆಡ್ಡಿ ಇನ್ನೇನು ಸ್ಥಳಕ್ಕೆ ಧಾವಿಸುತ್ತಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಜನಾರ್ಧನ ರೆಡ್ಡಿ ಬೆಂಬಲಿಗರು ಕೈಯಲ್ಲಿ ದೊಣ್ಣೆ ಹಿಡಿದು ಕಾಯುತ್ತಿದ್ದರು.

ಇದನ್ನೂ ಓದಿ: ರಾಹುಲ್‌ ಗಾಂಧಿ ಸ್ವತಃ ಶ್ರೀರಾಮನಿದ್ದಂತೆ! ಕಾಂಗ್ರೆಸ್‌ ನಾಯಕನಿಂದ ಹೊಸ ವಿವಾದ

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಆದರೂ ಪರಿಸ್ಥಿತಿ ಹತೋಟಿಗೆ ಬರುವ ಲಕ್ಷಣ ಕಾಣದ ಹಿನ್ನೆಲೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ಗುಂಡು ಕಾಂಗ್ರೆಸ್​ ಕಾರ್ಯಕರ್ತ ರಾಜಶೇಖರ್​ ಎಂಬವರಿಗೆ ತಗುಲಿದ್ದು ಅವರು ಮೃತಪಟ್ಟಿದ್ದಾರೆ.

Exit mobile version