ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಗೆ ಮಾಜಿ ಪ್ರಿಯತಮನ ಕಿರುಕುಳ : ವರನಿಂದ ಎಕ್ಸ್​ ಲವರ್​ ಹತ್ಯೆ

ತಾನು ಮದುವೆಯಾಗಬೇಕಿದ್ದ ಯುವತಿಗೆ ಇನ್​ಸ್ಟಾಗ್ರಾಂನಲ್ಲಿ ಮೆಸೇಜ್​ ಮಾಡಿ ಕಿರುಕುಳ ನೀಡುತ್ತಿದ್ದ ಯುವಕನನ್ನು ಕೊಲೆ ಮಾಡಿದ ಘಟನೆಯು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದಲ್ಲಿ ಸಂಭವಿಸಿದೆ. ಕೊಲೆಯಾದ ಯುವಕನನ್ನು 21 ವರ್ಷದ ಮಂಜುನಾಥ್​ ಎಂದು ಗುರುತಿಸಲಾಗಿದೆ. ಈತ ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದ ನಿವಾಸಿಯಾಗಿದ್ದ ಎನ್ನಲಾಗಿದೆ.

ಹತ್ಯೆಗೈದ ಆರೋಪಿಯನ್ನು ವೇಣು ಎಂದು ಗುರುತಿಸಲಾಗಿದೆ. ಈತ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಗೆ ಮಂಜುನಾಥ್​ ನಿರಂತರ ಮೆಸೇಜ್​ ಮಾಡುತ್ತಿದ್ದ ಎನ್ನಲಾಗಿದೆ. ಅಸಲಿಗೆ ಮಂಜುನಾಥ್​ ಹಾಗೂ ಆ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು ಯುವತಿಯ ನಿಶ್ಚಿತಾರ್ಥ ವೇಣು ಜೊತೆ ನಡೆದಿತ್ತು. ವೇಣು ಜೊತೆ ನಿಶ್ಚಿತಾರ್ಥದ ಬಳಿಕ ಇನ್ನು ನನಗೆ ಮೆಸೇಜ್​ ಮಾಡಬೇಡ ಎಂದು ಆ ಯುವತಿ ಮಂಜುನಾಥ್​ಗೆ ತಿಳಿಸಿದ್ದಳು ಎನ್ನಲಾಗಿದೆ.

ಆದರೂ ಮಂಜುನಾಥ್​ ಇನ್​ಸ್ಟಾಗ್ರಾಂ ಮೂಲಕ ಮೆಸೇಜ್​ ಮಾಡಿ ಹಿಂಸಿಸುತ್ತಿದ್ದ. ಈ ಬಗ್ಗೆ ಯುವತಿ ವೇಣು ಬಳಿ ಹೇಳಿಕೊಂಡಿದ್ದಳು. ಇದಾದ ಬಳಿಕ ವೇಣು ಮಂಜುನಾಥ್​ ಬಳಿ ನಿನ್ನೊಂದಿಗೆ ಮಾತನಾಡಬೇಕು ಬಾ ಎಂದು ಕರೆಯಿಸಿಕೊಂಡು ಬಳಿಕ ಸ್ನೇಹಿತರ ಜೊತೆ ಸೇರಿ ಕೊಲೆ ಮಾಡಿದ್ದಾನೆ. ತರೀಕರೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ಮಂಜುನಾಥ್​ನನ್ನು ಕೊಲೆ ಮಾಡಲು ವೇಣುವಿಗೆ ಸ್ನೇಹಿತರಾದ ಕಿರಣ್​, ಅಪ್ಪು , ಮಂಜು ಎಂಬವರು ಸಹಾಯ ಮಾಡಿದ್ದಾರೆ. ಮಂಜುನಾಥ್​ಗೆ ಚಾಕುವಿನಿಂದ ಇರಿದು ಈ ನಾಲ್ವರು ಎಸ್ಕೇಪ್​ ಆಗಿದ್ದರು. ಮಂಜುನಾಥ್​ನನ್ನು ಶಿವಮೊಗ್ಗದ ಮ್ಯಾಕ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಬ್ಯಾನರ್​ ಕಟ್ಟು ವಿಚಾರಕ್ಕೆ ಜಟಾಪಟಿ : ಗಾಲಿ ಜನಾರ್ದನ ರೆಡ್ಡಿ ನಿವಾಸದ ಎದುರು ಗುಂಡೇಟಿಗೆ ಕಾಂಗ್ರೆಸ್​ ಕಾರ್ಯಕರ್ತ ಬಲಿ

ಕೊಲೆಗೆ ಕಾರಣವೇನು ?

ಮಂಜುನಾಥನನ್ನು ಈ ಹಿಂದೆ ಪ್ರೀತಿಸಿದ್ದ ಯುವತಿ ವೇಣು ಜೊತೆ ನಿಶ್ಚಿತಾರ್ಥದ ಬಳಿಕ ಆತನನ್ನು ತೊರೆಯುವ ನಿರ್ಧಾರ ಮಾಡಿದ್ದಳು. ಆದರೆ ಇದನ್ನು ಸಹಿಸದ ಮಂಜುನಾಥ್​ ಆ ಯುವತಿಯ ಜೊತೆ ಇದ್ದ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿದ್ದ. ಈ ವಿಚಾರವಾಗಿ ಯುವತಿ ಹಾಗೂ ವೇಣು ನಡುವೆ ಗಲಾಟೆ ನಡೆದು ಆಕೆಯ ಅಣ್ಣ ಕಿರಣ್​ವರೆಗೂ ಮಾಹಿತಿ ತಲುಪಿತ್ತು. ಹೀಗಾಗಿ ಕಿರಣ್​ ಕೂಡ ಈ ಕೃತ್ಯದಲ್ಲಿ ವೇಣುಗೆ ಸಾಥ್​ ನೀಡಿದ್ದ. ಇಬ್ಬರೂ ಸೇರಿ ಮಂಜುನಾಥ್​ ಬಳಿಯಲ್ಲಿ ನಿನ್ನೊಂದಿಗೆ ಮಾತನಾಡಬೇಕು ಎಂದು ಹೇಳಿ ಅತ್ತಿಗನಾಳು ಬಳಿ ಕರೆಯಿಸಿಕೊಂಡಿದ್ದಾರೆ. ಇಲ್ಲಿ ಮಂಜುನಾಥ್​ ಜೊತೆ ಗಲಾಟೆ ಆರಂಭಿಸಿದ ವೇಣು & ಗ್ಯಾಂಗ್​ ಬಳಿಕ ಚಾಕುವಿನಿಂದ ಇರಿದು ಎಸ್ಕೇಪ್​ ಆಗಿದೆ.

Exit mobile version