ನಟಿ ರಚಿತಾ ರಾಮ್​ ಚಾಲಕನಿಂದ ಕರ್ತವ್ಯನಿರತ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ

ವಿಶ್ವವಿಖ್ಯಾತ ಹಂಪಿಯಲ್ಲಿ ಆಯೋಜಿಸಲಾಗಿದ್ದ ಹಂಪಿ ಉತ್ಸವ 2026ರಲ್ಲಿ ಅನುಚಿತ ಘಟನೆಯೊಂದು ನಡೆದಿದ್ದು ನಟಿ ರಚಿತಾ ರಾಮ್ ವಿರುದ್ಧ ಹೊಸ ವಿವಾದವೊಂದು ಸುತ್ತಿಕೊಂಡಿದೆ. ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ನಟಿ ರಚಿತಾ ರಾಮ್ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕರ್ತವ್ಯನಿರತ ಸರ್ಕಾರಿ ಅಧಿಕಾರಿ ಮೇಲೆ ರಚಿತಾ ರಾಮ್ ಕಾರು ಚಾಲಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರವಿಕುಮಾರ್ ಎಂಬವರ ಮೇಲೆ ಈ ಹಲ್ಲೆ ನಡೆದಿದೆ. ರಚಿತಾ ರಾಮ್ ಕಾರು ಚಾಲಕ ಅಧಿಕಾರಿಯ ಮುಖ ಹಾಗೂ ಕಣ್ಣಿಗೆ ಗಂಭೀರವಾದ ಏಟು ನೀಡಿದ್ದಾನೆ ಎನ್ನಲಾಗಿದೆ. ರವಿಕುಮಾರ್ ಅವರ ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿದ್ದು ರಕ್ತಸ್ರಾವವಾಗಿದೆ ಎಂದು ತಿಳಿದುಬಂದಿದೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.

ಇದನ್ನೂ ಓದಿ: ವಲವಾರ ಸಿನಿಮಾದಲ್ಲಿ ಸಕಲೇಶಪುರದ ಹಳ್ಳಿಯ ಚಿತ್ರಣ: ಸ್ಟಾರ್‌ಗಳ ಅಬ್ಬರವಿಲ್ಲದೆ ಗೆಲ್ಲುತ್ತಿದೆ ಕನ್ನಡಿಗರ ಮನ

ಫೆಬ್ರವರಿ 15ರಂದು ನಡೆದ ಹಂಪಿ ಉತ್ಸವದ ಕೊನೆಯ ದಿನದ ಕಾರ್ಯಕ್ರಮದಲ್ಲಿ ಈ ಘಟನೆ ಸಂಭವಿಸಿದೆ. ಈ ಘಟನೆ ನಡೆಯುವಾಗ ರಚಿತಾ ರಾಮ್ ಎಲ್ಲಿದ್ದರು ಎಂಬುದರ ಬಗ್ಗೆ ಇನ್ನೂ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಆದರೆ ಕರ್ತವ್ಯನಿರತ ಸರ್ಕಾರಿ ಅಧಿಕಾರಿ ಮೇಲೆ ಅನುಚಿತ ವರ್ತನೆ ತೋರಿದ ಕಾರು ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.

Exit mobile version