ಕುಂದಾಪುರದಲ್ಲಿ ನಿಲ್ಲದ ಟಿಪ್ಪರ್​ ಹಾವಳಿ : ರಸ್ತೆ ಅಪಘಾತದಲ್ಲಿ ಬಾಣಸಿಗ ಬಲಿ

ಕುಂದಾಪುರ ತಾಲೂಕಿನ ಶೆಟ್ರಕಟ್ಟೆಯಲ್ಲಿ ಸಂಭವಿಸಿದ ಸರ್ಕಾರಿ ಬಸ್​ ಹಾಗೂ ಟಿಪ್ಪರ್​ ಅಪಘಾತದ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ದುರಂತ ಸಂಭವಿಸಿದೆ. ಟಿಪ್ಪರ್​ ಡಿಕ್ಕಿ ಹೊಡೆದ ಪರಿಣಾಮ ಬಾಣಸಿಗರೊಬ್ಬರು ಮೃತಪಟ್ಟಿದ್ದಾರೆ. ಮೂಲತಃ ಆಲೂರಿನವರಾಗಿ ಪ್ರಸ್ತುತ ಕೋಟೇಶ್ವರದ ಅಂಕದಕಟ್ಟೆ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ 52 ವರ್ಷದ ಕೃಷ್ಣಮೂರ್ತಿ ಅಡಿಗ ಎಂಬವರು ಈ ದುರಂತದಲ್ಲಿ ಜೀವ ಕಳೆದುಕೊಂಡಿದ್ದಾರೆ.

ವೃತ್ತಿಯಲ್ಲಿ ಬಾಣಸಿಗರಾದ ಕೃಷ್ಣಮೂರ್ತಿ ಅಡಿಗ ಅವರು ವಾರದ ಹಿಂದಷ್ಟೇ ದ್ವಿಚಕ್ರ ವಾಹನ ಖರೀದಿಸಿದ್ದರು. ಅಡುಗೆ ಕಾರ್ಯವೊಂದರ ಸಿದ್ಧತೆಯಲ್ಲಿದ್ದ ಕೃಷ್ಣಮೂರ್ತಿ ಅಡಿಗೆ ಗಾಡಿಗೆ ಪೆಟ್ರೋಲ್​ ಹಾಕಿಸಬೇಕೆಂದು ಮನೆಯಿಂದ ಹೊರಟಿದ್ದಾರೆ .

ಇದನ್ನೂ ಓದಿ: ಶೆಟ್ರಕಟ್ಟೆ ಅಪಘಾತ ಪ್ರಕರಣ: ಪೊಲೀಸ್ ಸಿಬ್ಬಂದಿ ತಲೆದಂಡ…

ಸರ್ವೀಸ್​ ರಸ್ತೆಯಿಂದ ಹೆದ್ದಾರಿಗೆ ತಿರುಗುವ ಸಂದರ್ಭದಲ್ಲಿ ಎದುರಿನಿಂದ ಯಮರೂಪಿಯಂತೆ ಬಂದ ಟಿಪ್ಪರ್​​ ಕೃಷ್ಣಮೂರ್ತಿ ಅಡಿಗ ಚಲಾಯಿಸುತ್ತಿದ್ದ ಗಾಡಿಗೆ ಬಂದು ಗುದ್ದಿದೆ. ಡಿಕ್ಕಿಯ ರಭಸಕ್ಕೆ ಕೃಷ್ಣಮೂರ್ತಿ ಅವರ ತಲೆಗೆ ಭಾರೀ ಏಟಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version