ಸೆಕೆಂಡ್​ ಇನ್ನಿಂಗ್ಸ್​ಗೆ ಮುನ್ನುಡಿ ಬರೆದ ಶಿಖರ್ ಧವನ್​ : ಐರಿಷ್​ ಚೆಲುವೆಯೊಂದಿಗೆ ನಿಶ್ಚಿತಾರ್ಥ

ಟೀಂ ಇಂಡಿಯಾ ಮಾಜಿ ಓಪ್ನರ್​ ಶಿಖರ್ ಧವನ್​ ಮೊದಲ ಮದುವೆ ಮುರಿದುಬಿದ್ದ ವಿಚಾರ ಎಲ್ಲರಿಗೂ ತಿಳಿದಿರೋ ಸಂಗತಿ. ಆದರೆ ಇದೀಗ ಟೀಂ ಇಂಡಿಯಾ ಗಬ್ಬರ್​​ ತಮ್ಮ ಜೀವನದ 2ನೇ ಇನ್ನಿಂಗ್ಸ್​ ಆರಂಭಿಸಲು ಮುಂದಾಗಿದ್ದಾರೆ. ಐರಿಷ್​ ಮೂಲದ ತಮ್ಮ ಪ್ರೇಯಸಿ ಸೋಫು ಶೈನ್​ ಜೊತೆ ಶಿಖರ್​ ಧವನ್​ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ತಮ್ಮ ಅಧಿಕೃತ ಇನ್​ಸ್ಟಾ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿದ್ದ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಸಂದರ್ಭದಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿತ್ತು. ಆಗ ಯಾರು ಈ ಯುವತಿ ಎಂಬ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿತ್ತು. ಇದಾದ ಬಳಿಕ ಕಳೆದ ವರ್ಷ ಮೇ 1ರಂದು ಈ ಜೋಡಿ ತಮ್ಮ ಸಂಬಂಧವನ್ನು ಬಹಿರಂಗಪಡಿಸಿತ್ತು.

ಇದೀಗ ಶಿಖರ್​ ಧವನ್​ ಹಾಗೂ ಸೋಫಿ ಶೈನ್​ ತಮ್ಮ ಉಂಗುರಗಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮದುವೆಯ ದಿನಾಂಕವನ್ನು ಈ ಜೋಡಿ ಇನ್ನೂ ಬಹಿರಂಗಪಡಿಸಿಲ್ಲ. ಅಮೆರಿಕದ ಹಣಕಾಸು ಸೇವೆಗಳ ಸಂಸ್ಥೆಯಾದ ನಾರ್ದರ್ನ್ ಟ್ರಸ್ಟ್ ಕಾರ್ಪೊರೇಷನ್‌ನಲ್ಲಿ ಸೆಕೆಂಡ್ ವೈಸ್ ಪ್ರೆಸಿಡೆಂಟ್ – ಪ್ರಾಡಕ್ಟ್ ಕನ್ಸಲ್ಟೆಂಟ್ ಆಗಿ ಸೋಫಿ ಶೈನ್​ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.

ಈ ಮೊದಲು 2011ರಲ್ಲಿ ಎರಡು ಮಕ್ಕಳ ತಾಯಿ ಆಯಿಷಾ ಮುಖರ್ಜಿ ಎಂಬವರನ್ನು ಶಿಖರ್ ಧವನ್​ ಮದುವೆಯಾಗಿದ್ದರು. ಇವರ ವಿವಾಹದ ಬಳಿಕ ಜೋರಾವರ್​ ಎಂಬ ಪುತ್ರ ಜನಿಸಿದ್ದ. 11 ವರ್ಷ ವೈವಾಹಿಕ ಜೀವನ ನಡೆಸಿದ್ದ ಈ ಜೋಡಿ 2023ರಲ್ಲಿ ವಿಚ್ಚೇದನ ಪಡೆದುಕೊಂಡಿತ್ತು.

Exit mobile version