KGF ಖ್ಯಾತಿಯ, ಕನ್ನಡ ಖಳನಟ ಹರೀಶ್​ ರಾಯ್​ ನಿಧನ

KGF Harish Rai: ಕಳೆದ ಕೆಲ ವರ್ಷಗಳಿಂದ ತಮ್ಮ ಅನಾರೋಗ್ಯ ಕಾರಣದಿಂದಲೇ ಸುದ್ದಿಯಲ್ಲಿದ್ದ ಚಂದನವನದ ಖ್ಯಾತ ಖಳನಟ ಹರೀಶ್​ ರಾಯ್​ ಇಂದು ನಿಧನರಾಗಿದ್ದಾರೆ.

ಕ್ಯಾನ್ಸರ್​ ಕಾಯಿಲೆಯಿಂದ ಬಳಲುತ್ತಿದ್ದ ಹರೀಶ್​ ರಾಯ್​ ಅವರು ಕೆಜಿಎಫ್​ ಸಿನಿಮಾದ ಬಳಿಕ ಕೆಜಿಎಫ್​ ಚಾಚಾ ಎಂದೇ ಖ್ಯಾತಿ ಪಡೆದಿದ್ದರು.

ಕಳೆದ ಒಂದು ತಿಂಗಳಿನಿಂದ ನಟ ಹರೀಶ್​ ರಾಯ್ ಕಿದ್ವಾಯಿ​ ಆಸ್ಪತ್ರೆಯಲ್ಲಿಯೇ ದಾಖಲಾಗಿದ್ದು ಎನ್ನಲಾಗಿದೆ. ಕ್ಯಾನ್ಸರ್‌ ನಿಂದಾಗಿ ಹರೀಶ್​ ರಾಯ್​ ಅವರ ದೇಹವೇ ಬದಲಾಗಿ ಹೋಗಿತ್ತು. ಕ್ಯಾನ್ಸರ್ ವಿರುದ್ಧ ನಿರಂತರ ಹೋರಾಟ ನಡೆಸುತ್ತಲೇ ಬಂದ ಹರೀಶ್​ ರಾಯ್​ ಇಂದು ಕ್ಯಾನ್ಸರ್ ಕಾಯಿಲೆಯ ವಿರುದ್ಧ ಮಂಡಿಯೂರಿದ್ದಾರೆ.

ಚಿಕಿತ್ಸೆಗಾಗಿ ಹರೀಶ್​ ರಾಯ್​ ಆರ್ಥಿಕ ಸಹಾಯಕ್ಕೆ ಅಂಗಲಾಚಿದ್ದರು. ಈ ಸಂದರ್ಭದಲ್ಲಿ ನಟ ಯಶ್​, ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಸೇರಿದಂತೆ ಅನೇಕರು ಹರೀಶ್ ರಾಯ್​ ಅವರ ನೆರವಿಗೆ ಧಾವಿಸಿದ್ದರು. ಆದರೆ ಅವರೆಲ್ಲರ ಪ್ರಯತ್ನ ಇಂದು ವ್ಯರ್ಥವಾಗಿದೆ.

ಮೂಲತಃ ಕರಾವಳಿಯವರಾದ ಹರೀಶ್ ರಾಯ್​ ಅವರು ಜೋಡಿಹಕ್ಕಿ, ನನ್ನ ಕನಸಿನ ಹೂವೇ, ಸಂಜು ವೆಡ್ಸ್​ ಗೀತಾ, ತಾಯವ್ವ, ಓಂ, ಕೆಜಿಎಫ್​ ಚಾಪ್ಟರ್​ 1 ಹಾಗೂ ಚಾಪ್ಟರ್​ 2 ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಬಹುಭಾಷಾ ನಟರಾಗಿದ್ದ ಹರೀಶ್​ ರಾಯ್​ ತಮಿಳು ಸಿನಿಮಾಗಳಿಗೂ ಬಣ್ಣ ಹಚ್ಚಿದ್ದರು. ಹರೀಶ್​ ರಾಯ್​ ಅವರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಥೈರಾಯ್ಡ್​ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಹರೀಶ್​ ರಾಯ್​ ಅವರ ಹೊಟ್ಟೆಯಲ್ಲಿ ನೀರು ತುಂಬಿಕೊಂಡು ಹೊಟ್ಟೆಯುಬ್ಬರಿಸಿ ಹೋಗಿತ್ತು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಕನ್ನಡ ಚಿತ್ರರಂಗ, ಯುಟ್ಯೂಬರ್ಸ್​, ಖ್ಯಾತ ನಟರ ಅಭಿಮಾನಿ ಬಳಗ ಸೇರಿದಂತೆ ಹಲವು ಕಡೆಗಳಿಂದ ಅವರಿಗೆ ಸಹಾಯಹಸ್ತ ಒದಗಿ ಬಂದಿತ್ತು.

ಇದನ್ನೂ ಓದಿ: ಗಿಲ್ಲಿ-ಕಾವ್ಯ ಸ್ನೇಹಕ್ಕೆ ಸವಾಲು! ಯಾರು ತಗೋತಾರೆ ಮನೆಯಿಂದ ಬಂದ ಪತ್ರವನ್ನು?

Exit mobile version