ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಬಂದ್ ಆಗುತ್ತಾ? 10 ಲಕ್ಷ ಆದಾಯ ಮೀರಿದವರಿಗೆ ಕೇಂದ್ರದ ಶಾಕಿಂಗ್ ಸುದ್ದಿ

ವಾರ್ಷಿಕ 10 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳಿಗೆ LPG ಸಬ್ಸಿಡಿ ಸ್ಥಗಿತಗೊಳ್ಳುವ ಸಾಧ್ಯತೆ ಇದ್ದು, ತೈಲ ಕಂಪನಿಗಳು ಗ್ರಾಹಕರಿಗೆ ಈಗಾಗಲೇ ಎಚ್ಚರಿಕೆ ಸಂದೇಶ ಕಳುಹಿಸಲು ಆರಂಭಿಸಿವೆ.

ನವದೆಹಲಿ: ಅಡುಗೆ ಅನಿಲ ದರ ಏರಿಕೆಯಿಂದ ಸಂಕಷ್ಟದಲ್ಲಿರುವ ಜನರಿಗೆ ಇದೀಗ ಮತ್ತೊಂದು ದೊಡ್ಡ ಆಘಾತ ಎದುರಾಗುವ ಸಾಧ್ಯತೆ ಇದೆ. ಎಲ್‌ಪಿಜಿ ಸಬ್ಸಿಡಿ ವ್ಯವಸ್ಥೆಯಲ್ಲಿ ಹೊಸ ನಿಯಮ ಜಾರಿಗೆ ತರುವ ದಿಕ್ಕಿನಲ್ಲಿ ತೈಲ ಕಂಪನಿಗಳು ಕ್ರಮ ಆರಂಭಿಸಿದ್ದು, ಹೆಚ್ಚಿನ ಆದಾಯ ಹೊಂದಿರುವ ಕುಟುಂಬಗಳ ಮೇಲೆ ವಿಶೇಷ ಪರಿಶೀಲನೆ ನಡೆಯುತ್ತಿದೆ.

ವಾರ್ಷಿಕ 10 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳು ಇನ್ನು ಮುಂದೆ ಗೃಹಬಳಕೆಯ LPG ಸಿಲಿಂಡರ್‌ಗಳ ಸಬ್ಸಿಡಿ ಸೌಲಭ್ಯ ಕಳೆದುಕೊಳ್ಳಬಹುದು ಎಂಬ ಮಾಹಿತಿ ಹೊರಬಿದ್ದಿದೆ. ಆದಾಯ ತೆರಿಗೆ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಈ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಈ ಸಂಬಂಧ ಹಲವು ಗ್ರಾಹಕರಿಗೆ ಈಗಾಗಲೇ ಮೊಬೈಲ್ ಸಂದೇಶಗಳು ತಲುಪುತ್ತಿವೆ. “ನಿಮ್ಮ ಕುಟುಂಬದ ಆದಾಯ ನಿಗದಿತ ಮಿತಿಯನ್ನು ಮೀರಿದೆ. ಆದ್ದರಿಂದ LPG ಸಬ್ಸಿಡಿ ಸ್ಥಗಿತಗೊಳ್ಳಬಹುದು” ಎಂಬ ಎಚ್ಚರಿಕೆಯನ್ನು ತೈಲ ಕಂಪನಿಗಳು ಕಳುಹಿಸುತ್ತಿವೆ.

ಯಾರಿಗಾದರೂ ಈ ನಿರ್ಧಾರ ತಪ್ಪಾಗಿದೆ ಎಂದು ಅನಿಸಿದರೆ ಅಥವಾ ಮಾಹಿತಿಯಲ್ಲಿ ವ್ಯತ್ಯಾಸವಿದ್ದರೆ, 7 ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. 1800-2333-555 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಬಹುದು ಅಥವಾ ಸಂಬಂಧಿತ ತೈಲ ಕಂಪನಿಯ ಅಧಿಕೃತ ಪೋರ್ಟಲ್‌ನಲ್ಲಿ ದೂರು ದಾಖಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಗದಿತ ಅವಧಿಯಲ್ಲಿ ಯಾವುದೇ ಪ್ರತಿಕ್ರಿಯೆ ಸಿಗದಿದ್ದರೆ ಸಬ್ಸಿಡಿ ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳಲಿದೆ ಎನ್ನಲಾಗಿದೆ. ಈಗಾಗಲೇ ಕೆಲ ರಾಜ್ಯಗಳಲ್ಲಿ ಈ ಪ್ರಕ್ರಿಯೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತರಣೆ ಸಾಧ್ಯತೆ ಇದೆ.

ಪ್ರಸ್ತುತ 14.2 ಕೆಜಿ ಗೃಹಬಳಕೆಯ LPG ಸಿಲಿಂಡರ್‌ಗೆ ಸುಮಾರು ₹59ರವರೆಗೆ ಸಬ್ಸಿಡಿ ಸಿಗುತ್ತಿದೆ. ವರ್ಷಕ್ಕೆ 12 ರಿಂದ 13 ಸಿಲಿಂಡರ್‌ಗಳವರೆಗೆ ಸಬ್ಸಿಡಿ ಲಭ್ಯವಿದ್ದು, ಗರಿಷ್ಠ 15 ಸಿಲಿಂಡರ್‌ಗಳಿಗೆ ಮಿತಿ ವಿಧಿಸಲಾಗಿದೆ.

ಸಾಮಾನ್ಯ ಕುಟುಂಬಗಳ ಮೇಲಿನ ಖರ್ಚು ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ನಿರ್ಧಾರ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬದಲಾವಣೆಗಳ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Exit mobile version