ಪೋಸ್ಟ್ ಆಫೀಸ್ ಚೆಕ್‌ಬುಕ್‌ಗೆ ಹೊಸ ನಿಯಮ! ಮೊಬೈಲ್ ನಂಬರ್ ಲಿಂಕ್ ಇದ್ದರೆ ಮಾತ್ರ ಸೌಲಭ್ಯ

ತಪಾಲು ಇಲಾಖೆ ಇದೀಗ ಖಾತೆದಾರರ ಹೆಸರಿನೊಂದಿಗೆ ಪರ್ಸನಲೈಜ್ಡ್ ಚೆಕ್‌ಬುಕ್ ಸೇವೆ ಆರಂಭಿಸಿದೆ. ಈ ವ್ಯವಸ್ಥೆಯಿಂದ ಭದ್ರತೆ ಹೆಚ್ಚುವುದರ ಜೊತೆಗೆ ಪೋಸ್ಟ್ ಆಫೀಸ್ ಬ್ಯಾಂಕಿಂಗ್ ಸೇವೆಗಳು ಇನ್ನಷ್ಟು ಆಧುನಿಕವಾಗಲಿವೆ.

ದೇಶದ ತಪಾಲು ಇಲಾಖೆ ತನ್ನ ಉಳಿತಾಯ ಖಾತೆದಾರರಿಗೆ ಹೊಸ ಸೌಲಭ್ಯವನ್ನು ಪರಿಚಯಿಸಿದೆ. ಇನ್ನು ಮುಂದೆ ಪೋಸ್ಟ್ ಆಫೀಸ್ ಖಾತೆ ಹೊಂದಿರುವವರು ತಮ್ಮ ಹೆಸರು ಹಾಗೂ ಖಾತೆ ವಿವರಗಳು ಮೊದಲೇ ಮುದ್ರಿತವಾಗಿರುವ ಪರ್ಸನಲೈಜ್ಡ್ ಚೆಕ್‌ಬುಕ್ ಪಡೆಯಬಹುದು. ಇದರಿಂದ ಬ್ಯಾಂಕಿಂಗ್ ಸೇವೆಗಳ ಗುಣಮಟ್ಟ ಹೆಚ್ಚಿಸುವ ಪ್ರಯತ್ನ ನಡೆದಿದೆ.

ಇಲ್ಲಿಯವರೆಗೆ ಪೋಸ್ಟ್ ಆಫೀಸ್ ಚೆಕ್‌ಬುಕ್‌ಗಳಲ್ಲಿ ಖಾತೆದಾರರ ವೈಯಕ್ತಿಕ ವಿವರಗಳು ಮುದ್ರಿತವಾಗಿರಲಿಲ್ಲ. ಆದರೆ ಹೊಸ ವ್ಯವಸ್ಥೆಯಲ್ಲಿ ಹೆಸರು ಮತ್ತು ಖಾತೆ ಮಾಹಿತಿ ಮೊದಲೇ ಮುದ್ರಿತವಾಗಿರುವುದರಿಂದ ಚೆಕ್ ಬಳಕೆ ಹೆಚ್ಚು ಸುರಕ್ಷಿತವಾಗಲಿದೆ ಎಂದು ಇಲಾಖೆ ತಿಳಿಸಿದೆ.

ಈ ಸೌಲಭ್ಯ ಪಡೆಯಲು ಕೆಲವು ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಖಾತೆಗೆ ಸಂಬಂಧಿಸಿದ ಮೊಬೈಲ್ ಸಂಖ್ಯೆ ಮೂಲ CIF‌ಗೆ ಲಿಂಕ್ ಆಗಿರಬೇಕು. ಜೊತೆಗೆ ಖಾತೆಯಲ್ಲಿ ಕನಿಷ್ಠ 500 ರೂ. ಬ್ಯಾಲೆನ್ಸ್ ಇರಬೇಕು. ಚೆಕ್‌ಬುಕ್ ಶುಲ್ಕ ಹಾಗೂ ಜಿಎಸ್‌ಟಿ ಪಾವತಿಸಲು ಅಗತ್ಯ ಮೊತ್ತ ಖಾತೆಯಲ್ಲಿ ಇರಬೇಕಾಗಿದೆ.

ಖಾತೆ ನಿಷ್ಕ್ರಿಯವಾಗಿದ್ದರೆ ಅಥವಾ ಸ್ಥಗಿತಗೊಂಡಿದ್ದರೆ ಪರ್ಸನಲೈಜ್ಡ್ ಚೆಕ್‌ಬುಕ್ ಸೌಲಭ್ಯ ಸಿಗುವುದಿಲ್ಲ. ಆದ್ದರಿಂದ ಖಾತೆ ಸಕ್ರಿಯವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ.

ಗ್ರಾಹಕರಿಗೆ ಎರಡು ಆಯ್ಕೆಗಳು ಲಭ್ಯವಿರುತ್ತವೆ. ಸಾಮಾನ್ಯ ತಕ್ಷಣದ ಚೆಕ್‌ಬುಕ್ ಅಥವಾ ಪರ್ಸನಲೈಜ್ಡ್ ಚೆಕ್‌ಬುಕ್ — ಯಾವುದನ್ನು ಬೇಕಾದರೂ ಆಯ್ಕೆ ಮಾಡಬಹುದು. ಹೊಸ ಪರ್ಸನಲೈಜ್ಡ್ ಚೆಕ್‌ಬುಕ್‌ಗಳನ್ನು ಖಾತೆದಾರರ ನೋಂದಾಯಿತ ವಿಳಾಸಕ್ಕೆ ಉಚಿತವಾಗಿ ಕಳುಹಿಸಲಾಗುತ್ತದೆ.

ಪ್ರಸ್ತುತ ಈ ಸೇವೆಗೆ ಸಮೀಪದ ಪೋಸ್ಟ್ ಆಫೀಸ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಿದೆ. ಆದರೆ ಮುಂದಿನ ದಿನಗಳಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನೂ ಪರಿಚಯಿಸುವುದಾಗಿ ತಪಾಲು ಇಲಾಖೆ ಮಾಹಿತಿ ನೀಡಿದೆ.

ಖಾತೆದಾರರು ತಮ್ಮ ವಿಳಾಸ ವಿವರಗಳು ಪೋಸ್ಟ್ ಆಫೀಸ್ ದಾಖಲೆಗಳಲ್ಲಿ ಸರಿಯಾಗಿದೆಯೇ ಎಂಬುದನ್ನು ಮುಂಚಿತವಾಗಿ ಪರಿಶೀಲಿಸಿಕೊಳ್ಳುವುದು ಅಗತ್ಯ. ಏಕೆಂದರೆ ಚೆಕ್‌ಬುಕ್ ದಾಖಲೆಯಲ್ಲಿರುವ ವಿಳಾಸಕ್ಕೇ ಕಳುಹಿಸಲಾಗುತ್ತದೆ.

Exit mobile version