ಜನಸಾಮಾನ್ಯರಿಗೆ ಶೀಘ್ರದಲ್ಲೇ ಕಾದಿದೆ ಬೆಲೆ ಏರಿಕೆ ಶಾಕ್​..! 5 ದಿನಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಭಾರಿ ಏರಿಕೆ?

ಮುಂದಿನ ಐದು ದಿನಗಳಲ್ಲಿ ಭಾರತದಲ್ಲಿ ಪೆಟ್ರೋಲ್​, ಡೀಸೆಲ್​ ಹಾಗೂ ಎಲ್​ಪಿಜಿ ಸಿಲಿಂಡರ್​ಗಳ ದರದಲ್ಲಿ ಮತ್ತೆ ಏರಿಕೆ ಕಂಡುಬರಲಿದೆ ಎನ್ನಲಾಗಿದೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದದಿಂದಾಗಿ ಸಂಪೂರ್ಣ ವಿಶ್ವವೇ ತೈಲ ಬಿಕ್ಕಟ್ಟು ಎದುರಿಸುತ್ತಿದೆ. ಈಗಾಗಲೇ ಭಾರತದಲ್ಲಿ ಗೃಹಬಳಕೆಯ ಸಿಲಿಂಡರ್​ ಹಾಗೂ ವಾಣಿಜ್ಯ ಸಿಲಿಂಡರ್​ಗಳ ದರದಲ್ಲಿ ಏರಿಕೆ ಕಂಡುಬಂದಿದೆ. ಈ ಎಲ್ಲದರ ನಡುವೆ ಇದೀಗ ಜನಸಾಮಾನ್ಯರಿಗೆ ಭಾರೀ ದೊಡ್ಡ ಮಟ್ಟದ ಶಾಕ್​ ಕಾದಿದ್ದು ಮುಂದಿನ ಐದು ದಿನಗಳಲ್ಲಿ ಭಾರತದಲ್ಲಿ ಪೆಟ್ರೋಲ್​, ಡೀಸೆಲ್​ ಹಾಗೂ ಎಲ್​ಪಿಜಿ ಸಿಲಿಂಡರ್​ಗಳ ದರದಲ್ಲಿ ಮತ್ತೆ ಏರಿಕೆ ಕಂಡುಬರಲಿದೆ ಎನ್ನಲಾಗಿದೆ.

ಬೆಲೆ ಏರಿಕೆಗೆ ಈಗಾಗಲೇ ತೈಲೋತ್ಪನ್ನ ಕಂಪನಿಗಳು ಪ್ರಸ್ತಾವನೆ ಸಲ್ಲಿಸಿದ್ದು, ಕೇಂದ್ರ ಸರ್ಕಾರ ಬೆಲೆ ಏರಿಕೆಗೆ ಅನುಮೋದನೆ ನೀಡಿದ್ದಲ್ಲಿ ಪೆಟ್ರೋಲ್​ ಹಾಗೂ ಡೀಸೆಲ್​ ದರ ಪ್ರತಿ ಲೀಟರ್​ಗೆ 5 ರೂಪಾಯಿ ಏರಿಕೆ ಕಂಡುಬಂದರೆ , ಗೃಹಬಳಕೆಯ ಎಲ್​ಪಿಜಿ ಸಿಲಿಂಡರ್​ ದರ 50 ರೂಪಾಯಿಗಳಷ್ಟು ಏರಿಕೆ ಕಾಣಬಹುದು ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ : ಯೂಟ್ಯೂಬ್‌ನಿಂದ ಭರ್ಜರಿ ಕೊಡುಗೆ: ಇನ್ಮುಂದೆ ‘ಫ್ರೀ’ ಬಳಕೆದಾರರಿಗೂ ಸಿಗಲಿದೆ ಪಿಕ್ಚರ್-ಇನ್-ಪಿಕ್ಚರ್ ಫೀಚರ್ 

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದೆ. ಭವಿಷ್ಯದಲ್ಲಿ ಮುಂದುವರಿಯಲಿರುವ ತೈಲೋತ್ಪನ್ನ ಪೂರೈಕೆಯ ಅಡಚಣೆಗಳು ಹಾಗೂ ಅಭಾವದ ಪರಿಸ್ಥಿತಿಗಳನ್ನು ಗಮನದಲ್ಲಿರಿಸಿ ತೈಲೋತ್ಪನ್ನಗಳ ಬೆಲೆ ಏರಿಕೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಒಂದು ವೇಳೆ ಸರ್ಕಾರ ಬೆಲೆ ಏರಿಕೆ ಮಾಡಿದ್ದಲ್ಲಿ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ಮತ್ತೊಮ್ಮೆ ತಟ್ಟಲಿದೆ.

Exit mobile version